ಮಂಗಳೂರು: ಕನ್ನಡ ನಾಡು-ನುಡಿಗೆ ಎಲ್ಲರನ್ನೂ ಸೆಳೆಯುವ ವಿಶಿಷ್ಟ ಶಕ್ತಿ ಮತ್ತು ಸೌಂದರ್ಯವಿದೆ. ಇತರ ರಾಜ್ಯಗಳಿಂದ ಬಂದ ಅನ್ಯಭಾಷಿಕರು ಇಲ್ಲಿನ ನೆಲ, ಜಲ ಹಾಗೂ ಸಂಸ್ಕೃತಿಗೆ ಮಾರುಹೋಗಿ ಕರ್ನಾಟಕದ ಬಗ್ಗೆ ಅಪಾರ ಅಭಿಮಾನ ಬೆಳೆಸಿಕೊಂಡಿರುವ ಅನೇಕ ಉದಾಹರಣೆಗಳಿವೆ ಎಂದು ಕನ್ನಡ ಸಾಹಿತ್ಯ ಪರಿಷತ್ತಿನ ಮಂಗಳೂರು ತಾಲೂಕು ಘಟಕದ ಕೋಶಾಧಿಕಾರಿ ಎನ್. ಸುಬ್ರಾಯ ಭಟ್ ಹೇಳಿದರು.
ನಗರದ ಫಳ್ನೀರ್ನಲ್ಲಿರುವ ದ ನ್ಯೂ ಇಂಡಿಯಾ ಅಶ್ಯೂರೆನ್ಸ್ ಕಂಪೆನಿ ಲಿಮಿಟೆಡ್ನ ವಿಭಾಗೀಯ ಕಚೇರಿಯಲ್ಲಿ ಆಯೋಜಿಸಿದ್ದ ಕನ್ನಡ ರಾಜ್ಯೋತ್ಸವ ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಯಾಗಿ ಮಾತನಾಡಿದ ಅವರು, ಸ್ಥಳೀಯರು ಹಾಗೂ ಅನ್ಯರಾಜ್ಯಗಳ ಸಿಬ್ಬಂದಿ ಒಗ್ಗೂಡಿ ಅಭಿಮಾನದಿಂದ ರಾಜ್ಯೋತ್ಸವ ಆಚರಿಸುತ್ತಿರುವುದು ಮಾದರಿಯಾಗಿದೆ. ಇಲ್ಲಿ ಕನ್ನಡತನ ಮತ್ತು ಭಾರತೀಯತೆ ಮೇಳೈಸಿವೆ ಎಂದು ಮೆಚ್ಚುಗೆ ವ್ಯಕ್ತಪಡಿಸಿದರು.
ನ್ಯೂ ಇಂಡಿಯಾ ಕರಂಗಲ್ಪಾಡಿ ಶಾಖೆಯ ಪ್ರಬಂಧಕ ಪ್ರವೀಣ್ ದಾವಣಗೆರೆ ಪ್ರಸ್ತಾವನೆಗೈದು ರಾಜ್ಯೋತ್ಸವದ ಮಹತ್ವ ವಿವರಿಸಿದರು. ರಾಮಭವನ ಕಾಂಪ್ಲೆಕ್ಸ್ ಶಾಖೆಯ ಪ್ರಬಂಧಕ ಗುಂಜಿ ಶಿವಕುಮಾರ್ ಶುಭ ಹಾರೈಸಿದರು. ನಿವೃತ್ತ ಅಧಿಕಾರಿಗಳಾದ ಬಶೀರ್, ಕೆ. ಮಸ್ಕರೇನ್ಹಸ್, ಉದಯಕುಮಾರ್ ಶೆಟ್ಟಿ ಹಾಗೂ ರಘುವೀರ್ ಉಪಸ್ಥಿತರಿದ್ದರು.
ನಾನ್ ಸ್ಯೂಟ್ ಕ್ಲೈಮ್ಸ್ ಹಬ್ ಮುಖ್ಯಸ್ಥೆ ವೇದಾವತಿ ಎನ್. ಅವರ ಸಹಕಾರ ಮತ್ತು ಮಾರ್ಗದರ್ಶನದಲ್ಲಿ ಕಾರ್ಯಕ್ರಮ ನಡೆಯಿತು. ಆರಂಭದಲ್ಲಿ ‘ಹಚ್ಚೇವು ಕನ್ನಡದ ದೀಪ’ ಗೀತೆಯೊಂದಿಗೆ ವೀಣಾ, ಖುಷ್ಬೂ, ಗ್ರೀಷ್ಮಾ, ದೀಪಕ್, ವರ್ಷಾ ಹಾಗೂ ವಿದ್ಯಾ ದೀಪ ಬೆಳಗಿಸಿದರು. ಕನ್ನಡಾಂಬೆಗೆ ಪುಷ್ಪಾರ್ಚನೆ ಹಾಗೂ ನಾಡಗೀತೆಯ ಸಾಮೂಹಿಕ ಗಾಯನ ಕಾರ್ಯಕ್ರಮಕ್ಕೆ ವಿಶೇಷ ಮೆರುಗು ನೀಡಿತು.
ರಾಮಭವನ ಕಾಂಪ್ಲೆಕ್ಸ್ ಶಾಖೆಯ ಅಧಿಕಾರಿ ಆರ್. ಮಮತಾ ಕಾರ್ಯಕ್ರಮ ನಿರೂಪಿಸಿದರು.



