ಮಂಗಳೂರು: ದಕ್ಷಿಣ ಕನ್ನಡ ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತಿನ ಮಂಗಳೂರು ತಾಲೂಕು ಘಟಕದ ವತಿಯಿಂದ ಕನ್ನಡ ರಾಜ್ಯೋತ್ಸವದ ಪ್ರಯುಕ್ತ ಸಾಹಿತ್ಯ ಸಂಗೀತ ಸಂಭ್ರಮ ಕಾರ್ಯಕ್ರಮವು ನಗರದ ಶಾರದಾ ವಿದ್ಯಾಲಯದ ಪ್ರಾಂಗಣದಲ್ಲಿ ನಡೆಯಿತು.
ಕಾರ್ಯಕ್ರಮದಲ್ಲಿ ಪರಿಷತ್ತಿನ ಪದಾಧಿಕಾರಿ ರತ್ನಾವತಿ ಜೆ. ಬೈಕಾಡಿ ಅವರು ಸುಮಧುರ ನಾಡಭಕ್ತಿಗೀತೆಗಳನ್ನು ಹಾಡಿದರು. ಬೆನೆಟ್ ಅಮ್ಮನ್ನ ಅವರು ಕನ್ನಡ ಪತ್ರಿಕೆಗಳು, ಗ್ರಂಥ ಸಂಪಾದನೆ ಹಾಗೂ ಮುದ್ರಣ ಇತಿಹಾಸದ ಕುರಿತು ಮಾಹಿತಿ ನೀಡಿದರು. ಡಾ. ಮೀನಾಕ್ಷಿ ರಾಮಚಂದ್ರ ಅವರು ‘ದಕ್ಷಿಣ ಕನ್ನಡದಲ್ಲಿ ಕನ್ನಡ ಇಂದು’ ಎಂಬ ವಿಷಯದ ಕುರಿತು ಮಾತನಾಡಿದರು.
ರಘು ಇಡ್ಕಿದು, ಸುಬ್ರಾಯ ಭಟ್, ಗಣೇಶಪ್ರಸಾದ್ ಜೀ, ಸುಖಲಾಕ್ಷಿ ಸುವರ್ಣ, ಕೃಷ್ಣಪ್ಪ ನಾಯ್ಕ್, ಸನತ್ ಕುಮಾರ್ ಜೈನ್ ಹಾಗೂ ರವೀಂದ್ರನಾಥ್ ಅವರು ಕನ್ನಡ ನಾಡು-ನುಡಿಯ ಅಭಿಮಾನದ ಮಾತುಗಳೊಂದಿಗೆ ಹಾಡು, ಕವನ ಮತ್ತು ಚುಟುಕು ವಾಚನದ ಮೂಲಕ ಸಾಹಿತ್ಯಾಸಕ್ತರನ್ನು ರಂಜಿಸಿದರು.
ಕನ್ನಡ ಸಾಹಿತ್ಯ ಪರಿಷತ್ತಿನ ಮಂಗಳೂರು ತಾಲೂಕು ಘಟಕದ ಅಧ್ಯಕ್ಷ ಡಾ. ಮಂಜುನಾಥ ರೇವಣಕರ್ ಅಧ್ಯಕ್ಷತೆ ವಹಿಸಿ ರಾಜ್ಯೋತ್ಸವ ಸಂದೇಶ ನೀಡಿದರು. ಪ್ರಧಾನ ಕಾರ್ಯದರ್ಶಿ ಡಾ. ಮುರಲಿಮೋಹನ ಚೂಂತಾರು ಪ್ರಸ್ತಾವನೆಯೊಂದಿಗೆ ಸ್ವಾಗತಿಸಿದರು. ಕೋಶಾಧಿಕಾರಿ ಸುಬ್ರಾಯ ಭಟ್ ಕಾರ್ಯಕ್ರಮ ನಿರೂಪಿಸಿದರು. ಕಾರ್ಯದರ್ಶಿ ಗಣೇಶಪ್ರಸಾದ್ ಜೀ ವಂದಿಸಿದರು.



