ಮಂಗಳೂರು: ಮಂಗಳೂರು ಮಹಾನಗರಪಾಲಿಕೆ ಆಯುಕ್ತ ರಾಹುಲ್ ರತ್ನಂ ಪಾಂಡೆ ಅವರು ಮಂಗಳವಾರ ನಗರದ ವಿವಿಧ ಪ್ರದೇಶಗಳಿಗೆ ಭೇಟಿ ನೀಡಿ ಸಾರ್ವಜನಿಕರ ಸಮಸ್ಯೆಗಳನ್ನು ಆಲಿಸಿ, ಸ್ಥಳದಲ್ಲೇ ಪರಿಶೀಲನೆ ನಡೆಸಿದರು.
ಉಳ್ಳಾಲ ಹೊಯ್ಗೆ ಪ್ರದೇಶಕ್ಕೆ ದೋಣಿಯಲ್ಲಿ ತೆರಳಿದ ಆಯುಕ್ತರು, ಹಾನಿಗೊಳಗಾದ ಕಾಲುಸೇತುವೆ ಹಾಗೂ ಕುಡಿಯುವ ನೀರಿನ ಸಮಸ್ಯೆಗಳ ಕುರಿತು ನಿವಾಸಿಗಳಿಂದ ಮಾಹಿತಿ ಪಡೆದರು. ಪೈಪ್ಲೈನ್ ಅಳವಡಿಕೆ, ಬಸ್ ನಿಲ್ದಾಣ, ರಸ್ತೆ ಹಾಗೂ ಬಸ್ ಸೌಲಭ್ಯ ಕಲ್ಪಿಸುವಂತೆ ಸ್ಥಳೀಯರು ಮನವಿ ಮಾಡಿದರು.
ಕುಡಿಯುವ ನೀರಿನ ಸಮಸ್ಯೆ ಪರಿಹಾರಕ್ಕೆ ಮೊದಲ ಆದ್ಯತೆ ನೀಡುವುದಾಗಿ ಭರವಸೆ ನೀಡಿದ ಆಯುಕ್ತರು, ಪೈಪ್ಲೈನ್ ಅಳವಡಿಕೆಗೆ ಕನಿಷ್ಠ 50 ನಿವಾಸಿಗಳ ಸಹಿ ಹಾಗೂ ಅನುಮೋದನೆಯೊಂದಿಗೆ ನವೆಂಬರ್ 4ರೊಳಗೆ ಮನವಿ ಸಲ್ಲಿಸುವಂತೆ ಸೂಚಿಸಿದರು. ಮುಂದಿನ ವಾರದೊಳಗೆ ಟೆಂಡರ್ಗೆ ಅನುಮೋದನೆ ದೊರೆಯಲಿದ್ದು, ಕಾಮಗಾರಿ ಆರಂಭಿಸಲಾಗುವುದು ಎಂದು ತಿಳಿಸಿದರು.
ಈ ಸಂದರ್ಭದಲ್ಲಿ ಮಹಾನಗರಪಾಲಿಕೆಯ ಉಪ ಆಯುಕ್ತ (ಅಭಿವೃದ್ಧಿ) ನರೇಶ್ ಪಿ. ಶೆಣೈ ಸೇರಿದಂತೆ ಪರಿಸರ ಎಂಜಿನಿಯರಿಂಗ್ ಹಾಗೂ ಎಂಜಿನಿಯರಿಂಗ್ ವಿಭಾಗದ ಅಧಿಕಾರಿಗಳು ಉಪಸ್ಥಿತರಿದ್ದರು.



