ಮಂಗಳೂರು: ಧರ್ಮಸ್ಥಳ ಗ್ರಾಮದಲ್ಲಿ 1,510 ಅಸಹಜ ಸಾವುಗಳು ಸಂಭವಿಸಿವೆ ಎಂಬ ಮಾಹಿತಿ ಸುಳ್ಳಾಗಿದ್ದು, ಧರ್ಮಸ್ಥಳ ಹಾಗೂ ಸುತ್ತಮುತ್ತಲಿನ ಪ್ರದೇಶಗಳಲ್ಲಿ ಸಾವಿರಾರು ಅತ್ಯಾಚಾರ ಮತ್ತು ಕೊಲೆಗಳು ನಡೆದಿವೆ ಎಂದು ಬಿಂಬಿಸುವ ಮೂಲಕ ಗ್ರಾಮದ ಘನತೆಗೆ ಧಕ್ಕೆ ತರಲಾಗುತ್ತಿದೆ ಎಂದು ಗ್ರಾಮಸ್ಥರು ಆರೋಪಿಸಿದ್ದಾರೆ.
ಧರ್ಮಸ್ಥಳದ ಮಹೋತ್ಸವ ಸಭಾಭವನದಲ್ಲಿ ನಡೆದ ಪತ್ರಿಕಾಗೋಷ್ಠಿಯಲ್ಲಿ ಗ್ರಾಮಸ್ಥರ ಪರವಾಗಿ ಮಾತನಾಡಿದ ಶ್ರೀನಿವಾಸ ರಾವ್ ಕನ್ಯಾಡಿ, ಗಿರೀಶ್ ಮಟ್ಟಣ್ಣವರ್, ಮಹೇಶ್ ಶೆಟ್ಟಿ ತಿಮರೋಡಿ ಹಾಗೂ ಜಯಂತ್ ಟಿ. ವಿರುದ್ಧ ಕಾನೂನು ಕ್ರಮ ಕೈಗೊಳ್ಳುವಂತೆ ಆಗ್ರಹಿಸಿದರು.
2000ರಿಂದ 2014ರವರೆಗೆ ಧರ್ಮಸ್ಥಳ ಪರಿಸರದಲ್ಲಿ ದಾಖಲಾದ ಅಸಹಜ ಸಾವುಗಳ ಸಂಖ್ಯೆ 374 ಮಾತ್ರ. 1,510 ಸಾವುಗಳು ಧರ್ಮಸ್ಥಳ ಗ್ರಾಮಕ್ಕೆ ಮಾತ್ರ ಸಂಬಂಧಿಸಿವೆ ಎಂಬುದು ತಪ್ಪು ಮಾಹಿತಿ. ಈ ಸಂಖ್ಯೆಯನ್ನು ಆಧಾರವಾಗಿಟ್ಟುಕೊಂಡು ಗ್ರಾಮದಲ್ಲಿ ತಪ್ಪು ಘಟನೆಗಳು ನಡೆಯುತ್ತಿವೆ ಎಂಬಂತೆ ಪ್ರಚಾರ ಮಾಡಲಾಗುತ್ತಿದೆ ಎಂದು ಅವರು ದೂರಿದರು.
ಇಂತಹ ಆರೋಪಗಳಿಂದ ಧರ್ಮಸ್ಥಳ ಗ್ರಾಮದ ಪ್ರತಿಯೊಬ್ಬ ನಿವಾಸಿಯ ಗೌರವಕ್ಕೂ ಧಕ್ಕೆಯಾಗಿದೆ. ಸಾಮಾಜಿಕ ಜಾಲತಾಣಗಳಲ್ಲಿ ಸುಳ್ಳು ಮಾಹಿತಿ ಹರಡುವವರ ವಿರುದ್ಧವೂ ಕ್ರಮ ಕೈಗೊಳ್ಳಬೇಕು. ನ್ಯಾಯಾಲಯದಲ್ಲಿ ಸುಳ್ಳು ಮಾಹಿತಿ ನೀಡಲಾಗುತ್ತಿದೆ ಎಂದು ಆರೋಪಿಸಿದ ಅವರು, ಧರ್ಮಸ್ಥಳದ ವಿರುದ್ಧ ವ್ಯವಸ್ಥಿತ ಷಡ್ಯಂತ್ರ ನಡೆಯುತ್ತಿದೆ ಎಂದು ಆಕ್ರೋಶ ವ್ಯಕ್ತಪಡಿಸಿದರು.
ಮಹಿಳಾ ಆಯೋಗದ ಅಧ್ಯಕ್ಷರು ಉಲ್ಲೇಖಿಸಿರುವ 1,510 ಸಾವುಗಳ ಸಂಖ್ಯೆಯ ಮೂಲದ ಬಗ್ಗೆ ಸ್ಪಷ್ಟನೆ ನೀಡಬೇಕು. ಮತ್ತೊಮ್ಮೆ ವಿಶೇಷ ತನಿಖಾ ತಂಡ (SIT) ರಚಿಸುವಂತೆ ಮಾಡುತ್ತಿರುವ ಮನವಿ ಪೂರ್ವನಿಯೋಜಿತ ಷಡ್ಯಂತ್ರದ ಭಾಗವಾಗಿದೆ ಎಂದು ಅವರು ಅಭಿಪ್ರಾಯಪಟ್ಟರು.
ಯಾವುದೇ ನಿರ್ಧಾರ ಕೈಗೊಳ್ಳುವ ಮೊದಲು ಧರ್ಮಸ್ಥಳ ಗ್ರಾಮಸ್ಥರ ಅಹವಾಲುಗಳನ್ನು ಆಲಿಸಬೇಕು. ಗ್ರಾಮದ ಗೌರವಕ್ಕೆ ಧಕ್ಕೆ ತರುವ ಆರೋಪಗಳು ಮತ್ತು ಸುಳ್ಳು ಪ್ರಚಾರಗಳ ಬಗ್ಗೆ ಸೂಕ್ತ ತನಿಖೆ ನಡೆಸಿ ತಪ್ಪಿತಸ್ಥರ ವಿರುದ್ಧ ಕ್ರಮ ಕೈಗೊಳ್ಳಬೇಕು ಎಂದು ಶ್ರೀನಿವಾಸ ರಾವ್ ಕನ್ಯಾಡಿ ಒತ್ತಾಯಿಸಿದರು.
Previous Article
ನ.20ರಂದು ಮಂಗಳೂರಿನಲ್ಲಿ 73ನೇ ರಾಜ್ಯಮಟ್ಟದ ಸಹಕಾರ ಸಪ್ತಾಹ ಸಮಾರೋಪ ನಾಲ್ವರಿಗೆ ಸಹಕಾರಿ ರತ್ನ ಪ್ರಶಸ್ತಿ; ನಾಲ್ಕು ಸಂಘಗಳಿಗೆ ಸಹಕಾರ ಮಾಣಿಕ್ಯ ಗೌರವ
ನ.20ರಂದು ಮಂಗಳೂರಿನಲ್ಲಿ 73ನೇ ರಾಜ್ಯಮಟ್ಟದ ಸಹಕಾರ ಸಪ್ತಾಹ ಸಮಾರೋಪ ನಾಲ್ವರಿಗೆ ಸಹಕಾರಿ ರತ್ನ ಪ್ರಶಸ್ತಿ; ನಾಲ್ಕು ಸಂಘಗಳಿಗೆ ಸಹಕಾರ ಮಾಣಿಕ್ಯ ಗೌರವNext Article
ಬೋರ್ವೆಲ್ ಕೇಬಲ್ ಕಳ್ಳರಿಗೆ ಗ್ರಾಮಸ್ಥರಿಂದ ಧರ್ಮದೇಟು!
ಬೋರ್ವೆಲ್ ಕೇಬಲ್ ಕಳ್ಳರಿಗೆ ಗ್ರಾಮಸ್ಥರಿಂದ ಧರ್ಮದೇಟು!
