ಮಂಗಳೂರು: ಸರಕಾರಿ ಆಸ್ಪತ್ರೆಗಳನ್ನು ಬಲಪಡಿಸಬೇಕು, ಮಂಗಳೂರಿನಲ್ಲಿ ಕಿದ್ವಾಯಿ, ಜಯದೇವ ಹಾಗೂ ನಿಮ್ಹಾನ್ಸ್ ಆಸ್ಪತ್ರೆಗಳ ಘಟಕಗಳನ್ನು ಸ್ಥಾಪಿಸಬೇಕು ಮತ್ತು ಉಳ್ಳಾಲ ತಾಲೂಕಿಗೆ 100 ಹಾಸಿಗೆಗಳ ತಾಲೂಕು ಆಸ್ಪತ್ರೆ ಮಂಜೂರು ಮಾಡಬೇಕು ಎಂದು ಆಗ್ರಹಿಸಿ ಸಿಪಿಐಎಂ ಉಳ್ಳಾಲ ತಾಲೂಕು ಸಮಿತಿ ವತಿಯಿಂದ ತೊಕ್ಕೊಟ್ಟು ಬಸ್ ನಿಲ್ದಾಣದಲ್ಲಿ ಮುಸ್ಸಂಜೆ ಧರಣಿ ನಡೆಯಿತು. ಸಂಜೆ 4ರಿಂದ ರಾತ್ರಿ 10ರವರೆಗೆ ನಡೆದ ಧರಣಿಯನ್ನು ಸಿಪಿಐಎಂ ದಕ್ಷಿಣ ಕನ್ನಡ ಜಿಲ್ಲಾ ಕಾರ್ಯದರ್ಶಿ ಮುನೀರ್ ಕಾಟಿಪಳ್ಳ ಉದ್ಘಾಟಿಸಿದರು.
ಈ ಸಂದರ್ಭದಲ್ಲಿ ಮಾತನಾಡಿದ ಅವರು, ದಕ್ಷಿಣ ಕನ್ನಡ ಜಿಲ್ಲೆಯ ಆರೋಗ್ಯ ಕ್ಷೇತ್ರ ಖಾಸಗಿ ಮೆಡಿಕಲ್ ಕಾಲೇಜುಗಳು ಹಾಗೂ ಕಾರ್ಪೊರೇಟ್ ಆಸ್ಪತ್ರೆಗಳ ಹಿಡಿತದಲ್ಲಿ ಸಿಲುಕಿದೆ. ಜಿಲ್ಲೆಯ ರಾಜಕಾರಣ ಮತ್ತು ಪ್ರಮುಖ ರಾಜಕೀಯ ಪಕ್ಷಗಳು ಖಾಸಗಿ ಮೆಡಿಕಲ್ ಲಾಬಿಗಳ ಮುಂದೆ ಮಂಡಿಯೂರಿವೆ. ಸರಕಾರಿ ಆಸ್ಪತ್ರೆಗಳಿಗೆ ವೈದ್ಯರು, ಔಷಧಿ ಹಾಗೂ ಮೂಲಸೌಕರ್ಯಗಳನ್ನು ಒದಗಿಸದೆ ಉದ್ದೇಶಪೂರ್ವಕವಾಗಿ ದುರ್ಬಲಗೊಳಿಸಲಾಗುತ್ತಿದೆ. ಅಲ್ಲದೆ, ಸಾರ್ವಜನಿಕ ಆರೋಗ್ಯ ಸೇವೆಗಳನ್ನು ಪಿಪಿಪಿ ಮಾದರಿಯಲ್ಲಿ ಖಾಸಗಿಯವರಿಗೆ ವಹಿಸಲಾಗುತ್ತಿದೆ ಎಂದು ಆರೋಪಿಸಿದರು.
ಜನರ ಪರವಾಗಿ ನಿಲ್ಲಬೇಕಾದ ಆರೋಗ್ಯ ಸಚಿವ ಯು.ಟಿ. ಖಾದರ್ ಅವರು ಖಾಸಗಿ ಮೆಡಿಕಲ್ ಲಾಬಿಗಳ ಪರವಾಗಿ ನಿಂತಿರುವುದು ವಿಷಾದನೀಯ. ದಕ್ಷಿಣ ಕನ್ನಡ ಜಿಲ್ಲೆಯ ನಾಲ್ಕು ತಾಲೂಕುಗಳಲ್ಲಿ ಇರಬೇಕಾದ ತಾಲೂಕು ಆಸ್ಪತ್ರೆಗಳೇ ಇಲ್ಲ. ಅದರಲ್ಲೂ ಆರೋಗ್ಯ ಸಚಿವರ ಕ್ಷೇತ್ರವಾದ ಉಳ್ಳಾಲ ತಾಲೂಕಿನಲ್ಲಿ ತಾಲೂಕು ಮಟ್ಟದ ಆಸ್ಪತ್ರೆ ಇಲ್ಲದಿರುವುದು ಜಿಲ್ಲೆಯ ಆರೋಗ್ಯ ಕ್ಷೇತ್ರದ ದುಸ್ಥಿತಿಗೆ ಹಿಡಿದ ಕನ್ನಡಿಯಾಗಿದೆ ಎಂದು ಟೀಕಿಸಿದರು. ಆರೋಗ್ಯ ಕ್ಷೇತ್ರಕ್ಕೆ ಸಂಬಂಧಿಸಿದ ಜನರ ಬೇಡಿಕೆಗಳನ್ನು ಈಡೇರಿಸದಿದ್ದರೆ ಜನರನ್ನು ಸಂಘಟಿಸಿ ಸಚಿವರ ವಿರುದ್ಧ ಬೀದಿಗಿಳಿದು ಹೋರಾಟ ನಡೆಸಲಾಗುವುದು ಎಂದು ಎಚ್ಚರಿಸಿದರು.
ಪ್ರಾಸ್ತಾವಿಕವಾಗಿ ಮಾತನಾಡಿದ ಸಿಪಿಐಎಂ ಉಳ್ಳಾಲ ವಲಯ ಕಾರ್ಯದರ್ಶಿ ಸುನಿಲ್ ಕುಮಾರ್ ಬಜಾಲ್, ಉಳ್ಳಾಲದಲ್ಲಿರುವ ಏಕೈಕ ಸಮುದಾಯ ಆಸ್ಪತ್ರೆಯನ್ನು ಖಾಸಗಿ ಮೆಡಿಕಲ್ ಕಾಲೇಜಿಗೆ ಬಿಟ್ಟುಕೊಡಲಾಗಿದೆ ಎಂದು ಆರೋಪಿಸಿದರು. ಖಾಸಗಿ ಆಸ್ಪತ್ರೆಗಳು ದುಬಾರಿ ಬಿಲ್ ವಿಧಿಸುವುದಲ್ಲದೆ, ಬಿಲ್ ಪಾವತಿಸಲು ಸಾಧ್ಯವಾಗದ ರೋಗಿಗಳ ಮೃತದೇಹವನ್ನೂ ಹಸ್ತಾಂತರಿಸದೆ ಅಮಾನವೀಯವಾಗಿ ವರ್ತಿಸುತ್ತಿವೆ. ಉಳ್ಳಾಲದಲ್ಲಿ ತಾಲೂಕು ಆಸ್ಪತ್ರೆ ಹಾಗೂ ಕ್ಯಾನ್ಸರ್ ಮತ್ತು ಹೃದಯ ಚಿಕಿತ್ಸಾ ಆಸ್ಪತ್ರೆಗಳು ಸ್ಥಾಪನೆಯಾಗುವವರೆಗೆ ಹೋರಾಟ ನಿಲ್ಲುವುದಿಲ್ಲ. ಹೋರಾಟವನ್ನು ನಿರ್ಣಾಯಕ ಹಂತಕ್ಕೆ ಕೊಂಡೊಯ್ಯಲಾಗುವುದು ಎಂದರು.
ಧರಣಿಯನ್ನುದ್ದೇಶಿಸಿ ಸಿಪಿಐಎಂ ಜಿಲ್ಲಾ ಕಾರ್ಯದರ್ಶಿ ಮಂಡಳಿ ಸದಸ್ಯ ಸುಕುಮಾರ್ ತೊಕ್ಕೊಟ್ಟು, ಜಿಲ್ಲಾ ಸಮಿತಿ ಸದಸ್ಯರಾದ ಯು. ಜಯಂತ ನಾಯಕ್, ಬಿ.ಕೆ. ಇಮ್ತಿಯಾಜ್, ಯೋಗೀಶ್ ಜಪ್ಪಿನಮೊಗರು, ರಫೀಕ್ ಹರೇಕಳ, ಹಿರಿಯ ಕಮ್ಯುನಿಸ್ಟ್ ನಾಯಕ ಕೃಷ್ಣಪ್ಪ ಸಾಲ್ಯಾನ್, ಉಳ್ಳಾಲ ವಲಯ ಸಮಿತಿ ಸದಸ್ಯ ಚಂದ್ರಹಾಸ ಪಿಲಾರ್ ಹಾಗೂ ಪ್ರಗತಿಪರ ಚಿಂತಕ ರಮೇಶ್ ಉಳ್ಳಾಲ್ ಮಾತನಾಡಿದರು. ಜಿಲ್ಲಾ ಯುವ ನಾಯಕ ನಿತಿನ್ ಕುತ್ತಾರ್ ಸಮಾರೋಪ ಭಾಷಣ ಮಾಡಿದರು.
ಧರಣಿಯಲ್ಲಿ ಮುನ್ನೂರು ಪಂಚಾಯತ್ ಉಪಾಧ್ಯಕ್ಷ ಮಹಾಬಲ ದೆಪ್ಪಲಿಮಾರ್, ಪಂಚಾಯತ್ ಸದಸ್ಯರಾದ ಗಣೇಶ್ ಅಡ್ಯಂತಾಯ, ರಾಜೇಶ್ವರಿ, ಶಶಿಕಲಾ, ಆಶ್ರಫ್ ಹರೇಕಳ, ಡಿವೈಎಫ್ಐ ಜಿಲ್ಲಾ ನಾಯಕರಾದ ರಿಜ್ವಾನ್ ಹರೇಕಳ, ಸುನಿಲ್ ತೇವುಲ, ರಿಯಾಜ್ ಮಂಗಳೂರು, ಇಕ್ಬಾಲ್ ಹರೇಕಳ, ಅನಿಲ್ ತಿಲಕ್ ನಗರ, ಸಿಪಿಐಎಂ ಹಿರಿಯ ನಾಯಕ ಯು.ಬಿ. ನಾರಾಯಣ, ಮಹಿಳಾ ಮುಖಂಡರಾದ ಯೋಗಿತಾ ಉಳ್ಳಾಲ, ನಳಿನಾಕ್ಷಿ ಶೆಟ್ಟಿ ಸೇರಿದಂತೆ ಹಲವರು ಭಾಗವಹಿಸಿದ್ದರು.
ಧರಣಿಯ ನೇತೃತ್ವವನ್ನು ಸಿಪಿಐಎಂ ಉಳ್ಳಾಲ ವಲಯ ಮುಖಂಡರಾದ ಪದ್ಮಾವತಿ ಶೆಟ್ಟಿ, ಸುಂದರ ಕುಂಪಲ, ರೋಹಿದಾಸ್ ಭಟ್ನಗರ, ವಿಲಾಸಿನಿ, ಪ್ರಮೋದಿನಿ, ಜನಾರ್ಧನ ಕುತ್ತಾರ್, ಇಬ್ರಾಹಿಂ ಅಂಬ್ಲಮೊಗರು, ಸದಾಶಿವ ಕುತ್ತಾರ್, ನವೀನ್ ಗಿರಿಯಮೂಲೆ, ಅಬ್ಬಾಸ್ ಮದಕ ಹಾಗೂ ಚಂದ್ರಹಾಸ ಕುತ್ತಾರ್ ವಹಿಸಿದ್ದರು.



