ಶಿವಮೊಗ್ಗ: ಸಹಕಾರ ಕ್ಷೇತ್ರದಲ್ಲಿ ಪಾರದರ್ಶಕತೆ ಮೂಡಿಸಲು ಪ್ರತಿವರ್ಷ ಕಡ್ಡಾಯವಾಗಿ ಲೆಕ್ಕಪರಿಶೋಧನೆ ನಡೆಯಬೇಕು. ಸಹಕಾರ ಕ್ಷೇತ್ರದ ಮೇಲೆ ಜನರ ವಿಶ್ವಾಸ ಹೆಚ್ಚುವುದರ ಜೊತೆಗೆ ನಿರುದ್ಯೋಗ ಸಮಸ್ಯೆ ನಿವಾರಣೆಯಾಗಬೇಕು ಎಂದು ಸಚಿವ ಲಕ್ಷ್ಮಣ ಸಂಗಪ್ಪ ಸವದಿ ಹೇಳಿದರು.
ಶಿವಮೊಗ್ಗದಲ್ಲಿ ನಡೆದ 73ನೇ ರಾಜ್ಯಮಟ್ಟದ ಸಹಕಾರ ಸಪ್ತಾಹ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ಎರಡನೇ ಬಾರಿಗೆ ಸಹಕಾರ ಸಪ್ತಾಹದಲ್ಲಿ ಭಾಗವಹಿಸುತ್ತಿರುವುದು ನನ್ನ ಸೌಭಾಗ್ಯ. ಸಹಕಾರ ಒಕ್ಕೂಟಗಳಿಗೆ 121 ವರ್ಷಗಳ ಇತಿಹಾಸವಿದ್ದು, ದೇಶದ ಸಹಕಾರಿ ವಲಯ ಇಂದು ಹೆಮ್ಮರವಾಗಿ ಬೆಳೆದು ಜನರಿಗೆ ನೆರಳಾಗಿದೆ ಎಂದರು.
ರೈತರ ಮಕ್ಕಳು ಶಿಕ್ಷಣ ಪಡೆದರೂ ನಿರುದ್ಯೋಗಿಗಳಾಗಿ ಸಂಕಷ್ಟ ಎದುರಿಸುತ್ತಿದ್ದಾರೆ. ಈ ಸಮಸ್ಯೆ ನಿವಾರಣೆಗೆ ಸಹಕಾರ ಕ್ಷೇತ್ರದಲ್ಲಿ ಹೆಚ್ಚಿನ ಉದ್ಯೋಗಾವಕಾಶಗಳನ್ನು ಸೃಷ್ಟಿಸಬೇಕಿದೆ. ಬೆಳಗಾವಿಯಲ್ಲಿರುವ ಸಹಕಾರ ಕ್ಷೇತ್ರದ ಕ್ರೀಡಾ ಶಾಲೆಯನ್ನು ವಿಶ್ವವಿದ್ಯಾಲಯವಾಗಿ ಅಭಿವೃದ್ಧಿಪಡಿಸುವ ಚಿಂತನೆಯೂ ಇದೆ ಎಂದು ತಿಳಿಸಿದರು.
ಪ್ರತಿ ಹಳ್ಳಿಯಲ್ಲೂ ಕೃಷಿ ಪತ್ತಿನ ಸಹಕಾರ ಸಂಘಗಳು ಸ್ಥಾಪನೆಯಾಗಬೇಕು. ನಬಾರ್ಡ್ನಿಂದ ಸಹಕಾರಿ ಸಂಸ್ಥೆಗಳಿಗೆ ದೊರೆಯುತ್ತಿದ್ದ ಸಾಲದ ಪ್ರಮಾಣ ಕಡಿಮೆಯಾಗುತ್ತಿರುವುದರಿಂದ ರೈತರಿಗೆ ಸಾಲ ವಿತರಿಸಲು ತೊಂದರೆಯಾಗುತ್ತಿದೆ. ಹೀಗಾಗಿ ಸಹಕಾರಿ ಸಂಸ್ಥೆಗಳು ಮತ್ತಷ್ಟು ಬಲಿಷ್ಠವಾಗಬೇಕಿದೆ ಎಂದರು.
ದೇಶಕ್ಕೆ ಅನ್ನ ನೀಡುವ ರೈತರ ನೆರವಿಗೆ ಹಿಂದೆ ಬಂಗಾರಪ್ಪ ಅವರು ನಿಂತಿದ್ದರು ಎಂದು ಸ್ಮರಿಸಿದ ಅವರು, ಸರ್ಕಾರ ಹಾಲಿನ ದರ ಹೆಚ್ಚಳ ಮಾಡಿದ್ದರೂ ವಿರೋಧ ಪಕ್ಷಗಳು ಅದನ್ನು ವಿರೋಧಿಸುತ್ತಿವೆ ಎಂದು ಹೇಳಿದರು.



