ಉಡುಪಿ: ಉಡುಪಿ ತಾಲೂಕಿನ 80 ಬಡಗಬೆಟ್ಟು ಗ್ರಾಮದ ಕೆಳಕಬ್ಯಾಡಿಯ ಪುರಾತನ ಶ್ರೀ ಅಂಬಾ ಭವಾನಿ ದೇವಸ್ಥಾನದ ಸುತ್ತುಪೌಳಿ ನಿರ್ಮಾಣ ಕಾರ್ಯಕ್ಕೆ ನವೆಂಬರ್ 22ರಂದು ಶಿಲಾನ್ಯಾಸ ನೆರವೇರಲಿದೆ ಎಂದು ದೇವಸ್ಥಾನದ ಜೀರ್ಣೋದ್ಧಾರ ಸಮಿತಿ ಅಧ್ಯಕ್ಷ ಕೆ. ಪ್ರಭಾಕರ ಶೆಟ್ಟಿ ತಿಳಿಸಿದ್ದಾರೆ.
ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ದೇವಸ್ಥಾನದ ಸಂಪ್ರದಾಯ ಹಾಗೂ ಧಾರ್ಮಿಕ ಆಚರಣೆಗಳನ್ನು ಭಕ್ತಿಭಾವದಿಂದ ಮುಂದುವರಿಸಿಕೊಂಡು ಬರಲಾಗುತ್ತಿದೆ. ಇದೀಗ ಸುತ್ತುಪೌಳಿ ನಿರ್ಮಾಣದ ಸಂಕಲ್ಪ ಕಾರ್ಯರೂಪಕ್ಕೆ ಬರುತ್ತಿದ್ದು, ಹಲವು ವರ್ಷಗಳಿಂದ ಈ ಯೋಜನೆಗಾಗಿ ಕಾಯುತ್ತಿದ್ದ ಭಕ್ತರ ಕನಸು ನನಸಾಗುವ ಹಂತ ತಲುಪಿದೆ ಎಂದರು.
ನ.22ರಂದು ಬೆಳಿಗ್ಗೆ 9ರಿಂದ 10.30ರವರೆಗೆ ಮಹಿಳಾ ಭಜನಾ ಮಂಡಳಿಗಳಿಂದ ಭಜನಾ ಕಾರ್ಯಕ್ರಮ ನಡೆಯಲಿದೆ. ಬಳಿಕ ಬೆಳಿಗ್ಗೆ 10.30ರಿಂದ ಧಾರ್ಮಿಕ ವಿಧಿವಿಧಾನಗಳು ಆರಂಭವಾಗಲಿದ್ದು, ಬಂಟ್ವಾಳ ತಾಲೂಕಿನ ಓಡಿಯೂರು ಶ್ರೀ ಗುರುದೇವ ದತ್ತ ಸಂಸ್ಥಾನದ ಶ್ರೀ ಗುರುದೇವಾನಂದ ಸ್ವಾಮೀಜಿ ಅವರ ದಿವ್ಯಹಸ್ತದಿಂದ ಶಿಲಾನ್ಯಾಸ ನೆರವೇರಲಿದೆ.
ಕಾರ್ಯಕ್ರಮದಲ್ಲಿ ಸಂಸದರು, ಶಾಸಕರು, ಮಾಜಿ ಸಚಿವರು, ರಾಜಕೀಯ ಮುಖಂಡರು, ವಿವಿಧ ದೈವ-ದೇವಸ್ಥಾನಗಳ ಧರ್ಮದರ್ಶಿಗಳು ಹಾಗೂ ಊರಿನ ಹಿರಿಯರು ಭಾಗವಹಿಸಲಿದ್ದಾರೆ. ಮಧ್ಯಾಹ್ನ 12.30ರಿಂದ ಸಾರ್ವಜನಿಕ ಮಹಾ ಅನ್ನಸಂತರ್ಪಣೆ ನಡೆಯಲಿದೆ.
ಸುದ್ದಿಗೋಷ್ಠಿಯಲ್ಲಿ ಜೀರ್ಣೋದ್ಧಾರ ಸಮಿತಿಯ ಪ್ರಧಾನ ಕಾರ್ಯದರ್ಶಿ ಕೆ. ಅರುಣ್ ಕುಮಾರ್ ನಾಯಕ್ ಹಾಗೂ ಕೋಶಾಧಿಕಾರಿ ಸುಕೇಶ್ ಎಸ್. ನಾಯ್ಕ್ ಉಪಸ್ಥಿತರಿದ್ದರು.
Previous Article
ಡಿ.1ರಂದು ಕರಡು ಮತದಾರರ ಪಟ್ಟಿ ಪ್ರಕಟ: ಜ.20ಕ್ಕೆ ಅಂತಿಮ ಪಟ್ಟಿ
ಡಿ.1ರಂದು ಕರಡು ಮತದಾರರ ಪಟ್ಟಿ ಪ್ರಕಟ: ಜ.20ಕ್ಕೆ ಅಂತಿಮ ಪಟ್ಟಿ

