ಮಂಗಳೂರು ; ಮಂಗಳೂರಿನಲ್ಲಿ ಸೆಪ್ಟೆಂಬರ್ 18ರಂದು ನಡೆದ ಒಂದೇ ದಿನದ ಸಚಿವ ಸಂಪುಟ ಸಭೆಯ ಆಯೋಜನೆಗಾಗಿ ಕರ್ನಾಟಕ ಸರ್ಕಾರದ ಹಣಕಾಸು ಇಲಾಖೆಯಿಂದ ಬರೋಬ್ಬರಿ ₹3,83,26,700 (3.83 ಕೋಟಿ ರೂ.) ಮಂಜೂರು ಮಾಡಿರುವ ವಿಚಾರ ಇದೀಗ ಸಾರ್ವಜನಿಕ ವಲಯದಲ್ಲಿ ಚರ್ಚೆಗೆ ಕಾರಣವಾಗಿದೆ.
ಸೆಪ್ಟೆಂಬರ್ 17ರಂದು ಹೊರಡಿಸಲಾದ ಹಣಕಾಸು ಇಲಾಖೆಯ ಆದೇಶದ ಪ್ರಕಾರ, ಸಭೆಯ ಪೂರ್ವಸಿದ್ಧತೆ ಹಾಗೂ ವಿವಿಧ ವ್ಯವಸ್ಥೆಗಳಿಗಾಗಿ ಈ ಮೊತ್ತವನ್ನು ಮಂಜೂರು ಮಾಡಲಾಗಿದೆ. ಇದರಲ್ಲಿ ಸಿವಿಲ್ ಕಾಮಗಾರಿಗಳು, ಗಣ್ಯರು ಮತ್ತು ಹಿರಿಯ ಅಧಿಕಾರಿಗಳ ಆತಿಥ್ಯ, ಇಂಧನ, ಹೆಚ್ಚುವರಿ ವಾಹನಗಳ ಬಾಡಿಗೆ, ಸಾರಿಗೆ ವ್ಯವಸ್ಥೆ ಹಾಗೂ ವೇದಿಕೆ ನಿರ್ವಹಣೆ ಸೇರಿದಂತೆ ಹಲವು ಖರ್ಚುಗಳು ಸೇರಿವೆ.
ಈ ಎಲ್ಲಾ ಕಾಮಗಾರಿಗಳು ಮತ್ತು ವ್ಯವಸ್ಥೆಗಳ ಸಮನ್ವಯದ ಜವಾಬ್ದಾರಿಯನ್ನು ದಕ್ಷಿಣ ಕನ್ನಡ ನಿರ್ಮಿತಿ ಕೇಂದ್ರಕ್ಕೆ ವಹಿಸಲಾಗಿತ್ತು.
ಇನ್ನೊಂದು ಗಮನಾರ್ಹ ಸಂಗತಿಯೆಂದರೆ, ಖರೀದಿ ಪ್ರಕ್ರಿಯೆಗೆ ಕರ್ನಾಟಕ ಪಾರದರ್ಶಕ ಸಾರ್ವಜನಿಕ ಸಂಗ್ರಹಣೆಗಳ ಕಾಯ್ದೆ-1999ರ ಸೆಕ್ಷನ್ 4(ಜಿ) ಅಡಿಯಲ್ಲಿ ವಿನಾಯಿತಿ ನೀಡಲಾಗಿದೆ.
ಸಮಂಜಸ ದರದಲ್ಲಿ ಗುಣಮಟ್ಟದ ಸೇವೆಗಳನ್ನು ಪಡೆಯುವಂತೆ ಕಂದಾಯ ಇಲಾಖೆಗೆ ಹಣಕಾಸು ಇಲಾಖೆ ಸೂಚಿಸಿದೆ.
ಇತರ ಇಲಾಖೆಗಳ ವೆಚ್ಚ ಎಷ್ಟು?
ಹಣಕಾಸು ಇಲಾಖೆಯ ಆದೇಶದಲ್ಲಿ ಉಲ್ಲೇಖಿಸಿರುವ ₹3.83 ಕೋಟಿ ಹೊರತಾಗಿ, ಸಚಿವ ಸಂಪುಟ ಸಭೆಯ ಆಯೋಜನೆಗಾಗಿ ಇತರ ಇಲಾಖೆಗಳೂ ಪ್ರತ್ಯೇಕವಾಗಿ ವೆಚ್ಚ ಮಾಡಿರುವ ಸಾಧ್ಯತೆಯಿದೆ. ಆದರೆ ಆ ವೆಚ್ಚಗಳ ವಿವರಗಳು ಸದ್ಯ ಬಹಿರಂಗವಾಗಿಲ್ಲ.
ಒಂದೇ ದಿನದ ಸಭೆಗೆ ಇಷ್ಟೊಂದು ಮೊತ್ತ ಮಂಜೂರಾಗಿರುವುದು ಹಾಗೂ ಇತರ ಇಲಾಖೆಗಳ ವೆಚ್ಚವೂ ಪ್ರತ್ಯೇಕವಾಗಿರುವ ಸಾಧ್ಯತೆ ಹಿನ್ನೆಲೆಯಲ್ಲಿ, ಸಚಿವ ಸಂಪುಟ ಸಭೆಯ ಒಟ್ಟು ವೆಚ್ಚ ಎಷ್ಟಾಗಿರಬಹುದು ಎಂಬ ಪ್ರಶ್ನೆ ಸಾರ್ವಜನಿಕ ವಲಯದಲ್ಲಿ ಚರ್ಚೆಯಾಗುತ್ತಿದೆ.



