ಉಳ್ಳಾಲ: ಮಂಗಳೂರು ವಿಶ್ವವಿದ್ಯಾನಿಲಯದಲ್ಲಿ ನವೆಂಬರ್ 17ರಿಂದ 21ರವರೆಗೆ ಐದು ದಿನಗಳ ಮಕ್ಕಳ ಚಲನಚಿತ್ರೋತ್ಸವ ಆಯೋಜಿಸಲಾಗಿದೆ. ವಿಶ್ವವಿದ್ಯಾನಿಲಯದ ನೆಹರು ಚಿಂತನ ಕೇಂದ್ರ, ಎಸ್.ವಿ.ಪಿ. ಕನ್ನಡ ಅಧ್ಯಯನ ಕೇಂದ್ರ ಹಾಗೂ ಇಂಗ್ಲಿಷ್ ವಿಭಾಗದ ಸಹಯೋಗದಲ್ಲಿ ಕೊಣಾಜೆಯ ಮಂಗಳ ಸಭಾಂಗಣದಲ್ಲಿ ನಡೆಯಲಿರುವ ಉತ್ಸವದಲ್ಲಿ ಕನ್ನಡ, ತುಳು, ತಮಿಳು, ಮಲಯಾಳಂ, ಇಂಗ್ಲಿಷ್ ಹಾಗೂ ಹಿಂದಿ ಭಾಷೆಗಳ ಮಕ್ಕಳ ಚಿತ್ರಗಳನ್ನು ಪ್ರದರ್ಶಿಸಲಾಗುತ್ತದೆ. ನ.17ರಂದು ಚಲನಚಿತ್ರ ನಿರ್ದೇಶಕ ಟಿ.ಎಸ್. ನಾಗಾಭರಣ ಉತ್ಸವ ಉದ್ಘಾಟಿಸಲಿದ್ದು, ಬಳಿಕ ಅವರೊಂದಿಗೆ ಸಂವಾದ ನಡೆಯಲಿದೆ. ಮೊದಲ ದಿನ ಅವರು ನಿರ್ದೇಶಿಸಿದ ‘ಚಿನ್ನಾರಿ ಮುತ್ತ’ ಚಿತ್ರ ಪ್ರದರ್ಶನಗೊಳ್ಳಲಿದೆ. ನ.18ರಂದು ತುಳುವಿನ ‘ಕೋಟಿ ಚೆನ್ನಯ’, ನ.19ರಂದು ತಮಿಳಿನ ‘ಕಾಕಾ ಮುಟ್ಟೈ’, ನ.20ರಂದು ಇಂಗ್ಲಿಷ್ನ ‘ಡೆಡ್ ಪೊಯೆಟ್ಸ್ ಸೊಸೈಟಿ’ ಹಾಗೂ ನ.21ರಂದು ಮಲಯಾಳಂನ ‘ಕುಮ್ಮಟ್ಟಿ’ ಮತ್ತು ಹಿಂದಿಯ ‘ಎ ಬಿಲಿಯನ್ ಕಲರ್ ಸ್ಟೋರಿ’ ಚಿತ್ರಗಳನ್ನು ಪ್ರದರ್ಶಿಸಲಾಗುತ್ತದೆ. ಪ್ರತಿದಿನ ಚಿತ್ರ ಪ್ರದರ್ಶನದ ಬಳಿಕ ತಜ್ಞರೊಂದಿಗೆ ಸಂವಾದ ಹಾಗೂ ಅನಿಸಿಕೆಗಳ ವಿನಿಮಯ ನಡೆಯಲಿದೆ. ಸಿನಿಮಾ ಮೂಲಕ ಮಕ್ಕಳಲ್ಲಿ ಸೃಜನಶೀಲತೆ, ಸಾಮಾಜಿಕ ಪ್ರಜ್ಞೆ ಮತ್ತು ಮಾನವೀಯ ಮೌಲ್ಯಗಳನ್ನು ಬೆಳೆಸುವುದು ಉತ್ಸವದ ಉದ್ದೇಶವಾಗಿದೆ.



