ಬಹ್ರೇನ್: ಭಯೋತ್ಪಾದಕ ಚಟುವಟಿಕೆಗಳು ಹಾಗೂ ಇರಾನ್ನ ರೆವಲ್ಯೂಷನರಿ ಗಾರ್ಡ್ಸ್ ಜತೆ ಸಂಪರ್ಕ ಹೊಂದಿರುವ ಆರೋಪದ ಮೇಲೆ 64 ಶಿಯಾ ಮುಸ್ಲಿಮರಿಗೆ ಬಹ್ರೇನ್ ನ್ಯಾಯಾಲಯ ಸೋಮವಾರ (ನ.16) ಜೀವಾವಧಿ ಶಿಕ್ಷೆ ವಿಧಿಸಿದೆ. ಶಿಕ್ಷೆಗೊಳಗಾದವರಲ್ಲಿ 57 ಮಂದಿ ಧಾರ್ಮಿಕ ಮುಖಂಡರು ಸೇರಿದ್ದಾರೆ ಎಂದು ಬ್ರಿಟನ್ ಮೂಲದ ಬಹ್ರೇನ್ ಇನ್ಸ್ಟಿಟ್ಯೂಟ್ ಫಾರ್ ರೈಟ್ಸ್ ಅಂಡ್ ಡೆಮಾಕ್ರಸಿ (BIRD) ತಿಳಿಸಿದೆ.
ಇದೇ ಪ್ರಕರಣದಲ್ಲಿ ಇತರ ಐವರಿಗೆ 15 ವರ್ಷಗಳ ಜೈಲು ಶಿಕ್ಷೆ ವಿಧಿಸಲಾಗಿದೆ. ಒಟ್ಟು 69 ಮಂದಿ ವಿಚಾರಣೆ ಎದುರಿಸಿದ್ದು, ಅವರಲ್ಲಿ 13 ಮಂದಿಯನ್ನು ಗೈರುಹಾಜರಿಯಲ್ಲಿ ವಿಚಾರಣೆ ನಡೆಸಲಾಗಿದೆ. ಪ್ರಮುಖ ಧಾರ್ಮಿಕ ಮುಖಂಡ ಅಯತೊಲ್ಲಾ ಇಸಾ ಖಾಸಿಂ ಅವರೂ ಈ ಪಟ್ಟಿಯಲ್ಲಿದ್ದಾರೆ ಎಂದು ಮಾನವ ಹಕ್ಕುಗಳ ಸಂಘಟನೆ ತಿಳಿಸಿದೆ.
ಅಮೆರಿಕ ಮತ್ತು ಇಸ್ರೇಲ್ ಫೆಬ್ರವರಿಯಲ್ಲಿ ಇರಾನ್ ಮೇಲೆ ದಾಳಿ ಆರಂಭಿಸಿದ ಬಳಿಕ ಕೊಲ್ಲಿ ರಾಷ್ಟ್ರಗಳಲ್ಲಿ ಭದ್ರತಾ ಕ್ರಮಗಳನ್ನು ಬಿಗಿಗೊಳಿಸಲಾಗಿದೆ. ಇರಾನ್ನ ಪ್ರತೀಕಾರದ ದಾಳಿಗಳ ಹಿನ್ನೆಲೆಯಲ್ಲಿ ಬಹ್ರೇನ್ ಸೇರಿದಂತೆ ಹಲವು ರಾಷ್ಟ್ರಗಳು ಇರಾನ್ನ ರೆವಲ್ಯೂಷನರಿ ಗಾರ್ಡ್ಸ್ ಜತೆ ಸಂಪರ್ಕ ಹೊಂದಿರುವ ಶಂಕಿತ ಗುಂಪುಗಳ ವಿರುದ್ಧ ಕ್ರಮ ಕೈಗೊಳ್ಳುತ್ತಿವೆ.
ಶಿಯಾ ಮುಸ್ಲಿಮರು ಹೆಚ್ಚಿನ ಸಂಖ್ಯೆಯಲ್ಲಿರುವ ಬಹ್ರೇನ್ನಲ್ಲಿ ನೂರಾರು ಮಂದಿಯನ್ನು ಬೇಹುಗಾರಿಕೆ, ಭಯೋತ್ಪಾದನೆ ಹಾಗೂ ಇರಾನ್ನೊಂದಿಗೆ ಸಂಪರ್ಕ ಹೊಂದಿರುವ ಆರೋಪದ ಮೇಲೆ ಬಂಧಿಸಲಾಗಿದೆ ಎಂದು ಮಾನವ ಹಕ್ಕುಗಳ ಕಾರ್ಯಕರ್ತರು ಆರೋಪಿಸಿದ್ದಾರೆ. ಕೆಲವರ ಪೌರತ್ವವನ್ನೂ ರದ್ದುಗೊಳಿಸಲಾಗಿದೆ ಎನ್ನಲಾಗಿದೆ. ಆದರೆ, ಧಾರ್ಮಿಕ ಗುರುತಿನ ಆಧಾರದ ಮೇಲೆ ನಾಗರಿಕರ ವಿರುದ್ಧ ಕ್ರಮ ಕೈಗೊಳ್ಳಲಾಗುತ್ತಿದೆ ಎಂಬ ಆರೋಪವನ್ನು ಬಹ್ರೇನ್ ಸರ್ಕಾರ ನಿರಾಕರಿಸಿದೆ.
ಹಿಂಸಾಚಾರದ ಆರೋಪ
ಪ್ರಕರಣದ ವಿಚಾರಣೆ ವೇಳೆ ಆರೋಪಿಗಳಿಗೆ ಚಿತ್ರಹಿಂಸೆ ನೀಡಲಾಗಿದೆ ಎಂಬ ಗಂಭೀರ ಆರೋಪಗಳೂ ಕೇಳಿಬಂದಿವೆ. ಆರೋಪಿಗಳನ್ನು ದೀರ್ಘಕಾಲ ನಿಲ್ಲಿಸುವುದು, ಕಣ್ಣುಗಳಿಗೆ ಬಟ್ಟೆ ಕಟ್ಟುವುದು, ಕೈಕೋಳ ಹಾಕುವುದು, ನಿದ್ರೆಯಿಂದ ವಂಚಿಸುವುದು ಹಾಗೂ ದೈಹಿಕ ಮತ್ತು ಲೈಂಗಿಕ ಹಿಂಸೆಯ ಬೆದರಿಕೆ ಹಾಕಲಾಗಿದೆ ಎಂದು ಮಾನವ ಹಕ್ಕುಗಳ ಸಂಘಟನೆಗಳು ಆರೋಪಿಸಿವೆ.
ಅಲ್ಲದೆ, ಓದಲು ಅವಕಾಶ ನೀಡದೆ ದೀರ್ಘ ಹೇಳಿಕೆಗಳಿಗೆ ಸಹಿ ಹಾಕುವಂತೆ ಒತ್ತಡ ಹೇರಲಾಗಿದೆ ಎಂಬ ದೂರನ್ನೂ ಸಂಘಟನೆಗಳು ಉಲ್ಲೇಖಿಸಿವೆ. ಈ ಆರೋಪಗಳ ಕುರಿತು ತನಿಖೆ ನಡೆಸುವಂತೆ BIRD ಮತ್ತು ಹ್ಯೂಮನ್ ರೈಟ್ಸ್ ವಾಚ್ ಸೇರಿದಂತೆ ಹಲವು ಸಂಘಟನೆಗಳು ಬಹ್ರೇನ್ ಸರ್ಕಾರವನ್ನು ಒತ್ತಾಯಿಸಿವೆ.
ಬಹ್ರೇನ್ನಲ್ಲಿ ಶಿಯಾ ಧಾರ್ಮಿಕ ಮುಖಂಡರ ವಿರುದ್ಧ ಇಷ್ಟೊಂದು ದೊಡ್ಡ ಪ್ರಮಾಣದಲ್ಲಿ ಕ್ರಮ ಕೈಗೊಂಡಿರುವುದು ಹಿಂದೆಂದೂ ಕಂಡಿರದ ಬೆಳವಣಿಗೆ ಎಂದು BIRD ಪ್ರತಿನಿಧಿ ಸಯ್ಯದ್ ಅಹ್ಮದ್ ಅಲ್ವಾಡೇ ಅಭಿಪ್ರಾಯಪಟ್ಟಿದ್ದಾರೆ.




