ಹಾಸನ: ರೈತರ ಜಮೀನುಗಳಲ್ಲಿನ ಬೋರ್ವೆಲ್ ಕೇಬಲ್ಗಳನ್ನು ಕಳ್ಳತನ ಮಾಡುತ್ತಿದ್ದ ಇಬ್ಬರು ಆರೋಪಿಗಳನ್ನು ಗ್ರಾಮಸ್ಥರು ರೆಡ್ಹ್ಯಾಂಡ್ ಆಗಿ ಹಿಡಿದು ಧರ್ಮದೇಟು ನೀಡಿ ಪೊಲೀಸರಿಗೆ ಒಪ್ಪಿಸಿದ ಘಟನೆ ಬೇಲೂರು ಪಟ್ಟಣದ ಹೊರವಲಯದಲ್ಲಿ ನಡೆದಿದೆ.
ಕಳೆದ ಎರಡು-ಮೂರು ತಿಂಗಳಿಂದ ಈ ಭಾಗದ ರೈತರ ಜಮೀನುಗಳಲ್ಲಿನ ಬೋರ್ವೆಲ್ ಕೇಬಲ್ಗಳನ್ನು ಕಿಡಿಗೇಡಿಗಳು ನಿರಂತರವಾಗಿ ಕಳ್ಳತನ ಮಾಡುತ್ತಿದ್ದರು. ವಿದ್ಯುತ್ ಸಂಪರ್ಕ ಕಡಿತಗೊಂಡ ಸಮಯವನ್ನು ಬಳಸಿಕೊಂಡು ಕೇಬಲ್ಗಳನ್ನು ತುಂಡರಿಸಿ ಕೊಂಡೊಯ್ಯುತ್ತಿದ್ದರು. ಕೆಲವೆಡೆ ಮೋಟರ್ಗಳನ್ನೇ ಕದ್ದೊಯ್ದಿದ್ದರೆ, ಇನ್ನು ಕೆಲವು ಕಡೆ ಮೋಟರ್ಗಳನ್ನು ಹಾನಿಗೊಳಿಸಿ ಪರಾರಿಯಾಗುತ್ತಿದ್ದರು ಎನ್ನಲಾಗಿದೆ.
ನಿರಂತರ ಕಳ್ಳತನದಿಂದ ಸಾವಿರಾರು ರೂಪಾಯಿ ನಷ್ಟ ಅನುಭವಿಸಿದ್ದ ರೈತರು ಕಳ್ಳರ ಕಾಟದಿಂದ ಬೇಸತ್ತಿದ್ದರು. ಇದೀಗ ಕೇಬಲ್ ಕದ್ದುಕೊಂಡು ಹೋಗುತ್ತಿದ್ದ ಇಬ್ಬರನ್ನು ಗ್ರಾಮಸ್ಥರು ಬೆನ್ನಟ್ಟಿ ಹಿಡಿದಿದ್ದಾರೆ. ಬಳಿಕ ಅವರಿಗೆ ಹಲ್ಲೆ ನಡೆಸಿ ಬೇಲೂರು ಪೊಲೀಸರಿಗೆ ಒಪ್ಪಿಸಿದ್ದಾರೆ.
ಈ ಘಟನೆ ಬೇಲೂರು ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ನಡೆದಿದೆ.



