ಮೈಸೂರು: ಕರ್ನಾಟಕದ ಅಭಿವೃದ್ಧಿಗೆ ಸಂಬಂಧಿಸಿದ ಮೂರು ಪ್ರಮುಖ ಬೇಡಿಕೆಗಳನ್ನು ಉಪಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಅವರು ಪ್ರಧಾನಿ ನರೇಂದ್ರ ಮೋದಿ ಅವರ ಮುಂದಿಟ್ಟಿದ್ದಾರೆ. ಮೈಸೂರಿನಲ್ಲಿ ನಡೆದ CoSMOS ಕೇಂದ್ರದ ಉದ್ಘಾಟನಾ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ಮೇಕೆದಾಟು ಯೋಜನೆಗೆ ಅಗತ್ಯ ಅನುಮತಿಗಳನ್ನು ಶೀಘ್ರ ನೀಡಬೇಕು, ಕಸ್ತೂರಿರಂಗನ್ ವರದಿಯನ್ನು ಹಿಂಪಡೆಯಬೇಕು ಹಾಗೂ ರಾಜ್ಯದ 1,000 ಸರ್ಕಾರಿ ಶಾಲೆಗಳನ್ನು ಕರ್ನಾಟಕ ಪಬ್ಲಿಕ್ ಶಾಲೆಗಳನ್ನಾಗಿ ಮೇಲ್ದರ್ಜೆಗೇರಿಸಲು ಕಂಪನಿಗಳ ಸಿಎಸ್ಆರ್ ನಿಧಿ ಬಳಸಲು ಅವಕಾಶ ಕಲ್ಪಿಸಬೇಕು ಎಂದು ಮನವಿ ಮಾಡಿದರು. ಮೇಕೆದಾಟು ಕುಡಿಯುವ ನೀರಿನ ಯೋಜನೆಗೆ ಕೇಂದ್ರದ ಸಹಕಾರ ಅಗತ್ಯವೆಂದು ಒತ್ತಿಹೇಳಿದ ಅವರು, ಪಶ್ಚಿಮ ಘಟ್ಟದ ಜನರ ಹಿತಾಸಕ್ತಿ ಕಾಪಾಡುವಂತೆಯೂ ಪ್ರಧಾನಿ ಅವರ ಗಮನ ಸೆಳೆದರು.



