ಗಾಜನೂರು: ತಮಿಳುನಾಡಿನ ಗಾಜನೂರಿನಲ್ಲಿರುವ ವರನಟ ಡಾ. ರಾಜ್ಕುಮಾರ್ ಅವರ ಸಂಬಂಧಿಕರ ಮನೆಯಲ್ಲಿ ಸಂಭವಿಸಿದ ನಿಗೂಢ ಸ್ಫೋಟ ಪ್ರಕರಣಕ್ಕೆ ಸಂಬಂಧಿಸಿದಂತೆ ಪೊಲೀಸರು ಸ್ಪಷ್ಟನೆ ನೀಡಿದ್ದಾರೆ. ಇದು ಕಚ್ಚಾ ಬಾಂಬ್ ಅಥವಾ ನಾಡ ಬಾಂಬ್ ಸ್ಫೋಟವಲ್ಲ, ದೀಪಾವಳಿ ಸಂದರ್ಭದಲ್ಲಿ ಸಿಡಿಸಿದ ಪಟಾಕಿಯಿಂದ ಸಂಭವಿಸಿದ ಅವಘಡ ಎಂದು ಈರೋಡ್ ಪೊಲೀಸರು ತಿಳಿಸಿದ್ದಾರೆ.
ಡಾ. ರಾಜ್ಕುಮಾರ್ ಅವರ ತಂಗಿಯ ಮೊಮ್ಮಗಳು ಮನೋಜ್ಞಾ ಅವರ ನಿವಾಸದಲ್ಲಿ ಈ ಘಟನೆ ನಡೆದಿತ್ತು. ಸ್ಫೋಟದ ತೀವ್ರತೆಯಿಂದ ಆರಂಭದಲ್ಲಿ ಬಾಂಬ್ ದಾಳಿಯ ಶಂಕೆ ವ್ಯಕ್ತವಾಗಿತ್ತು. ಆದರೆ ಘಟನಾ ಸ್ಥಳ ಪರಿಶೀಲಿಸಿದ ಪೊಲೀಸರು, ಯಾವುದೇ ಪ್ರಬಲ ಸ್ಫೋಟಕ ಬಳಕೆಯಾಗಿಲ್ಲ ಎಂದು ಸ್ಪಷ್ಟಪಡಿಸಿದ್ದಾರೆ.
ಘಟನೆಯಲ್ಲಿ ಮನೆಯವರು ಅದೃಷ್ಟವಶಾತ್ ಪ್ರಾಣಾಪಾಯದಿಂದ ಪಾರಾಗಿದ್ದು, ಬಾಂಬ್ ದಾಳಿಯ ಆತಂಕಕ್ಕೆ ಪೊಲೀಸರ ಸ್ಪಷ್ಟನೆಯಿಂದ ತೆರೆ ಬಿದ್ದಿದೆ.



