ಬಂಟ್ವಾಳದ ಬಿ.ಸಿ.ರೋಡ್ ಫ್ಲೈಓವರ್ನಲ್ಲಿ ಬೈಕ್ ಸವಾರ ಕೆಳಕ್ಕೆ ಬಿದ್ದ ಘಟನೆ ಮತ್ತೊಮ್ಮೆ ಫ್ಲೈಓವರ್ ಸುರಕ್ಷತೆಯ ಕುರಿತು ಚರ್ಚೆಗೆ ಕಾರಣವಾಗಿದೆ.
ಮಂಗಳವಾರ ಮಧ್ಯಾಹ್ನ ನಡೆದ ಈ ಘಟನೆಯಲ್ಲಿ ಬೈಕ್ ಸವಾರ ಫ್ಲೈಓವರ್ನಿಂದ ಸರ್ವೀಸ್ ರಸ್ತೆಗೆ ಬಿದ್ದಿದ್ದಾರೆ. ಅದೃಷ್ಟವಶಾತ್ ಆ ಸಮಯದಲ್ಲಿ ಸರ್ವೀಸ್ ರಸ್ತೆಯಲ್ಲಿ ವಾಹನ ಸಂಚಾರ ಇಲ್ಲದ ಕಾರಣ ಭಾರೀ ಅನಾಹುತ ತಪ್ಪಿದೆ. ಹೆಲ್ಮೆಟ್ ಧರಿಸಿದ್ದರಿಂದ ಸವಾರನ ತಲೆಗೆ ಗಾಯವಾಗಿಲ್ಲ. ಗಾಯಾಳುವನ್ನು ಮಂಗಳೂರಿನ ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿದೆ. ಸವಾರ ಅತ್ತಾವರ ನಿವಾಸಿ ಎಂದು ಪ್ರತ್ಯಕ್ಷದರ್ಶಿಗಳು ತಿಳಿಸಿದ್ದಾರೆ. ಅಪಘಾತಕ್ಕೆ ಕಾರಣ ತಿಳಿದುಬಂದಿಲ್ಲ.
2016ರಲ್ಲೂ ಸಂಭವಿಸಿತ್ತು ಇದೇ ರೀತಿಯ ದುರಂತ
ಇದೇ ಫ್ಲೈಓವರ್ನಲ್ಲಿ 2016ರ ಡಿಸೆಂಬರ್ನಲ್ಲಿ ಸಂಭವಿಸಿದ್ದ ಅಪಘಾತದಲ್ಲಿ ಪಾಣೆಮಂಗಳೂರು ಸಮೀಪದ ಬೋಳಂಗಡಿ ನಿವಾಸಿ ವರದೇಶ್ ಎಂಬವರು ಬೈಕ್ ಸಹಿತ ಕೆಳಕ್ಕೆ ಉರುಳಿ ಬಿದ್ದು ಗಂಭೀರ ಗಾಯಗೊಂಡಿದ್ದರು. ಬಳಿಕ ಅವರು ಮೃತಪಟ್ಟಿದ್ದರು.
ಫ್ಲೈಓವರ್ನ ತಿರುವುಗಳು, ಏರು-ಇಳಿಜಾರು ಹಾಗೂ ಸುರಕ್ಷತಾ ವ್ಯವಸ್ಥೆಗಳ ಕುರಿತು ಸಾರ್ವಜನಿಕರು ಈ ಹಿಂದೆಯೂ ಆತಂಕ ವ್ಯಕ್ತಪಡಿಸಿದ್ದರು. ಇದೀಗ ಮತ್ತೊಮ್ಮೆ ಇಂತಹ ಘಟನೆ ಸಂಭವಿಸಿರುವುದು ಫ್ಲೈಓವರ್ನ ಸುರಕ್ಷತೆಯ ಬಗ್ಗೆ ಪ್ರಶ್ನೆಗಳನ್ನು ಹುಟ್ಟುಹಾಕಿದೆ.



