ಕಾಸರಗೋಡು: ಕರಾವಳಿ ಸಾಂಸ್ಕೃತಿಕ ಪ್ರತಿಷ್ಠಾನ (ರಿ.) ಇದರ 36ನೇ ಸಂಸ್ಥಾಪನಾ ವರ್ಷಾಚರಣೆಯ ಅಂಗವಾಗಿ ಕಾಸರಗೋಡು ಕನ್ನಡ ಗ್ರಾಮದಲ್ಲಿ ಸುಮಾರು 25 ಲಕ್ಷ ರೂ. ವೆಚ್ಚದಲ್ಲಿ ನಿರ್ಮಾಣವಾಗುತ್ತಿರುವ ‘ಕಾಸರಗೋಡು ಗೋ-ಕುಟೀರ’ದ ಕಾಮಗಾರಿ ಪ್ರಗತಿಯಲ್ಲಿದೆ. ಗೋ-ಕುಟೀರ ನಿರ್ಮಾಣ ಕಾರ್ಯಕ್ಕೆ ಗೋ-ಭಕ್ತರು, ಗೋ-ಪೋಷಕರು ಹಾಗೂ ದಾನಿಗಳು ಆರ್ಥಿಕ ನೆರವು ಮತ್ತು ಸಹಕಾರ ನೀಡುವಂತೆ ಪ್ರತಿಷ್ಠಾನ ಮನವಿ ಮಾಡಿದೆ.
ದೇಸಿ ಗೋವುಗಳನ್ನು ಉಳಿಸಿ ಬೆಳೆಸುವ ಉದ್ದೇಶದಿಂದ ನಿರ್ಮಾಣವಾಗುತ್ತಿರುವ ಗೋ-ಕುಟೀರವನ್ನು ಧಾರ್ಮಿಕ ಶ್ರದ್ಧಾ ಕೇಂದ್ರವಾಗಿ ರೂಪಿಸಲು ಯೋಜಿಸಲಾಗಿದೆ. ಇಲ್ಲಿ ಕುಟುಂಬ ಸಮೇತರಾಗಿ ಆಗಮಿಸುವ ಭಕ್ತರಿಗೆ ಗೋವುಗಳಿಗೆ ಗೋ-ಗ್ರಾಸ ನೀಡಲು, ಗೋ-ಆರತಿ ಬೆಳಗಿಸಲು, ಗೋ-ಸಂಕೀರ್ತನೆ ನಡೆಸಲು ಹಾಗೂ ಪ್ರಾರ್ಥನೆ ಸಲ್ಲಿಸಲು ಅವಕಾಶ ಕಲ್ಪಿಸುವ ಉದ್ದೇಶವಿದೆ. ಮನೆಗಳಲ್ಲಿನ ಶುಭ ಸಮಾರಂಭಗಳ ಸಂದರ್ಭದಲ್ಲಿಯೂ ಗೋಮಾತೆಯ ಸೇವೆ ಸಲ್ಲಿಸಿ ಸಂಭ್ರಮ ಹಂಚಿಕೊಳ್ಳಲು ವ್ಯವಸ್ಥೆ ಮಾಡಲಾಗುತ್ತದೆ.
ಗೋ-ಕುಟೀರದ ಪರಿಸರದಲ್ಲಿ ಗೋವುಗಳಿಗೆ ಅಗತ್ಯವಾದ ಹಸಿ ಹುಲ್ಲು ಬೆಳೆಸುವ ಯೋಜನೆಯನ್ನೂ ರೂಪಿಸಲಾಗಿದೆ.
ಕೃಷಿ ಮತ್ತು ಸಾಂಸ್ಕೃತಿಕ ಚಟುವಟಿಕೆಗಳಿಗೂ ಆದ್ಯತೆ
ಗೋ-ಕುಟೀರದ ಸಮೀಪದಲ್ಲಿ ‘ಕಾಸರಗೋಡು ಕೃಷಿ ಕುಟೀರ’ ನಿರ್ಮಿಸುವ ಯೋಜನೆಯನ್ನೂ ಪ್ರತಿಷ್ಠಾನ ಹಮ್ಮಿಕೊಂಡಿದೆ. ವಿವಿಧ ಸಂಘ-ಸಂಸ್ಥೆಗಳು, ಬ್ಯಾಂಕುಗಳು, ಉದ್ಯಮಗಳು, ಕೈಗಾರಿಕಾ ಸಂಸ್ಥೆಗಳು, ದೇವಸ್ಥಾನಗಳು, ಮಠಗಳು ಹಾಗೂ ಟ್ರಸ್ಟ್ಗಳ ಪ್ರಾಯೋಜಕತ್ವದಲ್ಲಿ ಸಾವಯವ ಕೃಷಿ ಸೇರಿದಂತೆ ಹಲವು ಚಟುವಟಿಕೆಗಳನ್ನು ನಡೆಸಲು ಉದ್ದೇಶಿಸಲಾಗಿದೆ.
ಗ್ರಾಮೀಣ ವಿದ್ಯಾರ್ಥಿಗಳು, ಯುವಜನರು ಮತ್ತು ಮಹಿಳೆಯರಿಗಾಗಿ ಹೊಲಿಗೆ, ವಸ್ತ್ರ ವಿನ್ಯಾಸ, ಕಂಪ್ಯೂಟರ್, ಡಿಜಿಟಲ್ ಮಾಧ್ಯಮ ಹಾಗೂ ಕೃತಕ ಬುದ್ಧಿಮತ್ತೆ (ಎಐ) ತರಬೇತಿ ಕೇಂದ್ರಗಳನ್ನು ಸ್ಥಾಪಿಸುವ ಯೋಜನೆಯಿದೆ. ಇದರೊಂದಿಗೆ ಗ್ರಾಮೀಣ ಜಾನಪದ ವಸ್ತುಸಂಗ್ರಹಾಲಯ, ಕಾಸರಗೋಡು ಕನ್ನಡ ಪತ್ರಿಕಾ ಮ್ಯೂಸಿಯಂ, ಹಿರಿಯ ನಾಗರಿಕರಿಗಾಗಿ ಗ್ರಾಮೀಣ ವೈದ್ಯಕೀಯ ಕ್ಲಿನಿಕ್, ಗ್ರಂಥಾಲಯ, ಸಾಹಿತ್ಯ ಕುಟೀರ ಹಾಗೂ ಭಜನಾ ಸಂಕೀರ್ತನಾ ಕುಟೀರಗಳನ್ನು ಸ್ಥಾಪಿಸಲು ಉದ್ದೇಶಿಸಲಾಗಿದೆ.
ಕಾಸರಗೋಡು ಜಿಲ್ಲೆಯ ಕನ್ನಡ ವಿದ್ಯಾರ್ಥಿಗಳಿಗೆ ರಜಾ ದಿನಗಳಲ್ಲಿ ಗುರುಕುಲ ಮಾದರಿಯಲ್ಲಿ ಕನ್ನಡ ಭಾಷೆ, ಸಾಹಿತ್ಯ, ಶಿಕ್ಷಣ, ಸಂಸ್ಕೃತಿ, ಜಾನಪದ, ಇತಿಹಾಸ, ರಂಗಭೂಮಿ ಹಾಗೂ ಯಕ್ಷಗಾನದ ತರಬೇತಿ ನೀಡುವ ‘ಕಾಸರಗೋಡು ಸಂಸ್ಕೃತಿ ಕುಟೀರ’ ಸ್ಥಾಪನೆಯೂ ಯೋಜನೆಯಲ್ಲಿದೆ. ಜೊತೆಗೆ ‘ನಮ್ಮ ಮನೆ’ ಹೆಸರಿನಲ್ಲಿ ವಿಶ್ರಾಂತಿ ಗೃಹ ನಿರ್ಮಿಸುವ ಉದ್ದೇಶವಿದೆ.
ಈ ಮಹತ್ವಾಕಾಂಕ್ಷಿ ಯೋಜನೆಗಳಿಗೆ ಗೋ-ಭಕ್ತರು, ದಾನಿಗಳು ಹಾಗೂ ಸಾರ್ವಜನಿಕರು ಉದಾರವಾಗಿ ನೆರವು ನೀಡುವಂತೆ ಕರಾವಳಿ ಸಾಂಸ್ಕೃತಿಕ ಪ್ರತಿಷ್ಠಾನದ ಅಧ್ಯಕ್ಷ ಶಿವರಾಮ ಕಾಸರಗೋಡು ಮನವಿ ಮಾಡಿದ್ದಾರೆ.
ದೇಣಿಗೆ ಮತ್ತು ಸಂಪರ್ಕ ವಿವರ:
ಶಿವರಾಮ ಕಾಸರಗೋಡು, ಅಧ್ಯಕ್ಷರು, ಕರಾವಳಿ ಸಾಂಸ್ಕೃತಿಕ ಪ್ರತಿಷ್ಠಾನ (ರಿ.), ಕಾಸರಗೋಡು ಗೋ-ಕುಟೀರ, ಕನ್ನಡ ಗ್ರಾಮ, ಕಾಸರಗೋಡು–671121.
ಮೊಬೈಲ್ ಮತ್ತು ಗೂಗಲ್ ಪೇ: 9448572016
ಇಮೇಲ್: shivaramakasaragod@gmail.com
ಗೋ-ಕುಟೀರ ನಿರ್ಮಾಣ ಕಾರ್ಯಕ್ಕೆ ನೆರವು ನೀಡುವುದರ ಜೊತೆಗೆ ಈ ಮಾಹಿತಿಯನ್ನು ಸಾಮಾಜಿಕ ಜಾಲತಾಣಗಳಲ್ಲಿ ಹಂಚಿಕೊಂಡು ಯೋಜನೆಗೆ ಸಹಕರಿಸುವಂತೆ ಪ್ರತಿಷ್ಠಾನ ಮನವಿ ಮಾಡಿದೆ.




