ಮಂಗಳೂರು: ದಕ್ಷಿಣ ಕನ್ನಡ ಜಿಲ್ಲೆಯ ಗುರುವಾಯನಕೆರೆ–ಉಪ್ಪಿನಂಗಡಿ ರಾಜ್ಯ ಹೆದ್ದಾರಿಯ ಕುಪ್ಪೆಟ್ಟಿ–ಉಪ್ಪಿನಂಗಡಿ ರಸ್ತೆ ಸಂಪೂರ್ಣ ಹದಗೆಟ್ಟಿರುವುದನ್ನು ಖಂಡಿಸಿ ಕುಪ್ಪೆಟ್ಟಿ ನಾಗರಿಕ ಹೋರಾಟ ಸಮಿತಿಯ ವತಿಯಿಂದ ಕಲ್ಲೇರಿ ಜಂಕ್ಷನ್ನಲ್ಲಿ ಬೃಹತ್ ಪ್ರತಿಭಟನಾ ಸಮಾವೇಶ ನಡೆಯಿತು.
ಸಮಿತಿಯ ಅಧ್ಯಕ್ಷ ಅಬ್ಬಾಸ್ ಬಟ್ಲಡ್ಕ ಅಧ್ಯಕ್ಷತೆ ವಹಿಸಿದ್ದರು. ನಿವೃತ್ತ ಪೊಲೀಸ್ ಅಧಿಕಾರಿ ಅಣ್ಣಿಗೌಡ ಪುಷ್ಪಗಿರಿ ಮಾತನಾಡಿ, ಸುಮಾರು 60 ವರ್ಷಗಳ ಹಿಂದೆ ರಸ್ತೆ ನಿರ್ವಹಣೆಗಾಗಿ ಗ್ಯಾಂಗ್ ವರ್ಕರ್ಸ್ಗಳನ್ನು ನೇಮಿಸಲಾಗುತ್ತಿತ್ತು. ಅಂತಹ ವ್ಯವಸ್ಥೆಯನ್ನು ಮತ್ತೆ ಪ್ರಾರಂಭಿಸುವ ಮೂಲಕ ರಸ್ತೆ ನಿರ್ವಹಣೆಗೆ ಆದ್ಯತೆ ನೀಡಬೇಕು ಎಂದು ಆಗ್ರಹಿಸಿದರು.
ಎಸ್ಎಸ್ಎಫ್ ರಾಜ್ಯ ಕಾರ್ಯದರ್ಶಿ ಮಹಮ್ಮದ್ ಆಲಿ ತುರ್ಕಳಿಕೆ ಮಾತನಾಡಿ, ರಸ್ತೆಯ ದುಸ್ಥಿತಿಯಿಂದಾಗಿ ಪ್ರತಿನಿತ್ಯ ಸಂಚರಿಸುವ ಸಾರ್ವಜನಿಕರು, ವಿದ್ಯಾರ್ಥಿಗಳು, ವಾಹನ ಚಾಲಕರು, ಕಾರ್ಮಿಕರು ಹಾಗೂ ರೋಗಿಗಳು ತೀವ್ರ ತೊಂದರೆ ಅನುಭವಿಸುತ್ತಿದ್ದಾರೆ. ಆದರೂ ರಸ್ತೆ ಅಭಿವೃದ್ಧಿಯನ್ನು ಕಡೆಗಣಿಸಲಾಗುತ್ತಿದೆ ಎಂದು ಆಕ್ರೋಶ ವ್ಯಕ್ತಪಡಿಸಿದರು.
ನವೆಂಬರ್ 16ರೊಳಗೆ ರಸ್ತೆ ಕಾಮಗಾರಿ ಆರಂಭಿಸಬೇಕು. ಇಲ್ಲದಿದ್ದರೆ ರಸ್ತೆ ತಡೆದು ತೀವ್ರ ಪ್ರತಿಭಟನೆ ನಡೆಸಲಾಗುವುದು ಎಂದು ಎಚ್ಚರಿಕೆ ನೀಡಿದರು.
‘ಭರವಸೆ ಬೇಡ, ರಸ್ತೆ ಬೇಕು; ನ್ಯಾಯ ಬೇಕು’ ಎಂಬ ಘೋಷಣೆಗಳೊಂದಿಗೆ ಪ್ರತಿಭಟನಾಕಾರರು ರಸ್ತೆ ತಡೆದು ಸರ್ಕಾರದ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದರು. ಇದರಿಂದ ಕೆಲಕಾಲ ವಾಹನ ಸಂಚಾರಕ್ಕೆ ಅಡಚಣೆ ಉಂಟಾಯಿತು. ಉಪ್ಪಿನಂಗಡಿ ಪೊಲೀಸ್ ಠಾಣೆಯ ಪೊಲೀಸರು ಸ್ಥಳಕ್ಕೆ ಆಗಮಿಸಿ ಪರಿಸ್ಥಿತಿಯನ್ನು ನಿಯಂತ್ರಿಸಿದರು.
Previous Article
ಕರ್ಕಶ ಶಬ್ದ: ಮೂರು ಪ್ರವಾಸಿ ಬಸ್ಗಳಿಗೆ ದಂಡ
ಕರ್ಕಶ ಶಬ್ದ: ಮೂರು ಪ್ರವಾಸಿ ಬಸ್ಗಳಿಗೆ ದಂಡNext Article
ಸವಣೂರು: ನ.16ರಂದು ‘ಸಹಕಾರ ರಶ್ಮಿ’ ಉದ್ಘಾಟನೆ
ಸವಣೂರು: ನ.16ರಂದು ‘ಸಹಕಾರ ರಶ್ಮಿ’ ಉದ್ಘಾಟನೆ
