ಉಡುಪಿ: ಕರ್ನಾಟಕ ರಾಜ್ಯೋತ್ಸವ ಪ್ರಶಸ್ತಿಯ ಮೊದಲ ಪಟ್ಟಿಯಲ್ಲಿ ಉಡುಪಿಯ ಆದರ್ಶ ಆಸ್ಪತ್ರೆಯ ಆಡಳಿತ ನಿರ್ದೇಶಕ ಡಾ.ಜಿ.ಎಸ್. ಚಂದ್ರಶೇಖರ್ ಅವರ ಹೆಸರನ್ನು ಪ್ರಕಟಿಸಿ, ಬಳಿಕ ತಾಂತ್ರಿಕ ದೋಷದ ನೆಪದಲ್ಲಿ ಕೈಬಿಟ್ಟಿರುವ ಸರ್ಕಾರದ ಕ್ರಮಕ್ಕೆ ವ್ಯಾಪಕ ಆಕ್ರೋಶ ವ್ಯಕ್ತವಾಗಿದೆ.
ಪಟ್ಟಿಯಲ್ಲಿ ಉಡುಪಿ ಜಿಲ್ಲೆಯ ಬದಲು ಉತ್ತರ ಕನ್ನಡ ಎಂದು ನಮೂದಾಗಿದ್ದ ಹಿನ್ನೆಲೆಯಲ್ಲಿ ಸರ್ಕಾರ ಹೆಸರು ಕೈಬಿಟ್ಟು, ಉತ್ತರ ಕನ್ನಡದ ಜಿ.ಯು. ಭಟ್ ಅವರನ್ನು ಆಯ್ಕೆ ಮಾಡಿತ್ತು.
ಈ ಕ್ರಮವನ್ನು ಖಂಡಿಸಿರುವ ಮನೋವೈದ್ಯ ಡಾ.ಪಿ.ವಿ. ಭಂಡಾರಿ ಹಾಗೂ ಕನ್ನಡ ಸಾಹಿತ್ಯ ಪರಿಷತ್ತಿನ ಉಡುಪಿ ತಾಲೂಕು ಘಟಕದ ಅಧ್ಯಕ್ಷ ರವಿರಾಜ್ ಎಚ್.ಪಿ., 30 ವರ್ಷಗಳಿಗೂ ಹೆಚ್ಚು ಕಾಲ ವೈದ್ಯಕೀಯ ಮತ್ತು ಸಾಮಾಜಿಕ ಸೇವೆ ಸಲ್ಲಿಸಿರುವ ಡಾ. ಚಂದ್ರಶೇಖರ್ ಅವರಿಗೆ ಘೋಷಿಸಿದ್ದ ಪ್ರಶಸ್ತಿಯನ್ನು ಉಡುಪಿ ಜಿಲ್ಲೆಯ ಹೆಸರಿನೊಂದಿಗೆ ಮರುಘೋಷಿಸಬೇಕು ಎಂದು ಸರ್ಕಾರವನ್ನು ಒತ್ತಾಯಿಸಿದ್ದಾರೆ.



