ಮಂಜೇಶ್ವರ, ನ. 9: ಮಂಜೇಶ್ವರ ಬ್ಲಾಕ್ ಪಂಚಾಯತ್ ವ್ಯಾಪ್ತಿಯಲ್ಲಿ ಪ್ರಧಾನಮಂತ್ರಿ ಆವಾಸ್ ಯೋಜನೆ (PMAY) ಅಡಿಯಲ್ಲಿ ಫಲಾನುಭವಿಗಳಿಗೆ ಮಂಜೂರಾಗಿದ್ದ ಸುಮಾರು ₹17 ಲಕ್ಷವನ್ನು ಕ್ಲರ್ಕ್ ಒಬ್ಬರು ತಮ್ಮ ವೈಯಕ್ತಿಕ ಖಾತೆಗೆ ವರ್ಗಾಯಿಸಿಕೊಂಡಿದ್ದಾರೆ ಎಂಬ ಆರೋಪ ಕೇಳಿಬಂದಿದ್ದು, ಪ್ರಕರಣದ ಸಮಗ್ರ ತನಿಖೆ ನಡೆಸಿ ತಪ್ಪಿತಸ್ಥರನ್ನು ಬಂಧಿಸುವಂತೆ ಆಗ್ರಹಿಸಿ ಬಿಜೆಪಿ ನೇತೃತ್ವದಲ್ಲಿ ಬ್ಲಾಕ್ ಪಂಚಾಯತ್ ಕಚೇರಿಗೆ ಪ್ರತಿಭಟನಾ ಮಾರ್ಚ್ ಹಾಗೂ ಧರಣಿ ನಡೆಯಿತು.
ಬಿಜೆಪಿ ಜಿಲ್ಲಾಧ್ಯಕ್ಷೆ ಎಂ.ಎಲ್. ಅಶ್ವಿನಿ ಪ್ರತಿಭಟನೆಯನ್ನು ಉದ್ಘಾಟಿಸಿದರು. ಈ ಸಂದರ್ಭದಲ್ಲಿ ಮಾತನಾಡಿದ ಅವರು, ಕೇಂದ್ರ ಸರ್ಕಾರದ ಯೋಜನೆಗಳು ಕೇರಳದ ಎಡ ಮತ್ತು ಬಲ ಮೈತ್ರಿಕೂಟಗಳ ನಾಯಕರು, ಅಧಿಕಾರಿಗಳು ಹಾಗೂ ಗುತ್ತಿಗೆದಾರರಿಗೆ ಹಣ ಲೂಟಿ ಮಾಡುವ ಮೂಲಗಳಾಗಿ ಮಾರ್ಪಟ್ಟಿವೆ ಎಂದು ಆರೋಪಿಸಿದರು.
ಬ್ಲಾಕ್ ಪಂಚಾಯತ್ ಮತ್ತು ಖಜಾನೆಯ ಹಿರಿಯ ಅಧಿಕಾರಿಗಳ ಗಮನಕ್ಕೆ ಬಾರದೆ ಅಥವಾ ಸಹಕಾರವಿಲ್ಲದೆ ಸುಮಾರು 17 ಲಕ್ಷ ರೂ.ಗಳನ್ನು ಒಂದೇ ಖಾತೆಗೆ ವರ್ಗಾಯಿಸಲು ಸಾಧ್ಯವಿಲ್ಲ. ಹೀಗಾಗಿ ಈ ಪ್ರಕರಣದಲ್ಲಿ ಆಡಳಿತಾತ್ಮಕ ಮಟ್ಟದ ಹೊಣೆಗಾರಿಕೆ ಹಾಗೂ ಅಧಿಕಾರಿಗಳ ಪಾತ್ರದ ಬಗ್ಗೆಯೂ ಸಮಗ್ರ ತನಿಖೆ ನಡೆಯಬೇಕು ಎಂದು ಅವರು ಒತ್ತಾಯಿಸಿದರು.
ರಾಜ್ಯಾದ್ಯಂತ ಲೈಫ್ ಮಿಷನ್ ಸೇರಿದಂತೆ ಮನೆ ನಿರ್ಮಾಣ ಯೋಜನೆಗಳಲ್ಲಿ ಹಣ ದುರುಪಯೋಗ ಮತ್ತು ಭ್ರಷ್ಟಾಚಾರ ನಡೆಯುತ್ತಿದೆ ಎಂದು ಆರೋಪಿಸಿದ ಅವರು, ನಿರ್ಮಾಣ ದೋಷಗಳಿಂದಾಗಿ ವಾಸಕ್ಕೆ ಯೋಗ್ಯವಲ್ಲದ ಸ್ಥಿತಿಯಲ್ಲಿರುವ ಫ್ಲ್ಯಾಟ್ಗಳನ್ನು ಕೆಡವಬೇಕಾದ ಪರಿಸ್ಥಿತಿಯೂ ವಿವಿಧ ಜಿಲ್ಲೆಗಳಲ್ಲಿ ವರದಿಯಾಗಿದೆ ಎಂದು ಹೇಳಿದರು.
ಬಿಜೆಪಿ ಮಂಜೇಶ್ವರ ಮಂಡಲ ಅಧ್ಯಕ್ಷ ಆದರ್ಶ ಬಿ.ಎಂ. ಪ್ರತಿಭಟನೆಯ ಅಧ್ಯಕ್ಷತೆ ವಹಿಸಿದ್ದರು. ಬಿಜೆಪಿ ಮುಖಂಡರಾದ ಮಣಿಕಂಠ ರೈ, ಪದ್ಮನಾಭ ಕಡಪರ, ಹರಿಶ್ಚಂದ್ರ ಮಂಜೇಶ್ವರ, ಎ.ಕೆ. ಕಯ್ಯಾರ್, ಚಂದ್ರಾವತಿ ಶೆಟ್ಟಿ, ವಿದ್ಯಾಕುಮಾರಿ, ವಿಕ್ರಮ ರೈ ಹಾಗೂ ಸದಾಶಿವ ಚೇರಾಲ್ ಮತ್ತಿತರರು ನೇತೃತ್ವ ವಹಿಸಿದ್ದರು.
Previous Article
ಕೊಟ್ಟಾರ ಚೌಕಿಯಿಂದ ಲೇಡಿಹಿಲ್ ವರೆಗೆ ಸ್ಮಾರ್ಟ್ ರಸ್ತೆ ನಿರ್ಮಾಣ
ಕೊಟ್ಟಾರ ಚೌಕಿಯಿಂದ ಲೇಡಿಹಿಲ್ ವರೆಗೆ ಸ್ಮಾರ್ಟ್ ರಸ್ತೆ ನಿರ್ಮಾಣ

