ಮಂಗಳೂರು: ನಗರದ ಮೂಲಸೌಕರ್ಯ ಅಭಿವೃದ್ಧಿಗೆ ಮತ್ತೊಂದು ಮಹತ್ವದ ಹೆಜ್ಜೆಯಾಗಿ ಮಂಗಳೂರು ನಗರಾಭಿವೃದ್ಧಿ ಪ್ರಾಧಿಕಾರದ (ಮುಡಾ) ವತಿಯಿಂದ ಕೊಟ್ಟಾರ ಚೌಕಿಯಿಂದ ಲೇಡಿಹಿಲ್ನ ನಾರಾಯಣ ಗುರು ವೃತ್ತದವರೆಗೆ ನೂತನ ಸ್ಮಾರ್ಟ್ ರಸ್ತೆ ನಿರ್ಮಾಣಕ್ಕೆ ಯೋಜನೆ ರೂಪಿಸಲಾಗಿದೆ.
ಈ ಹಿನ್ನೆಲೆಯಲ್ಲಿ ಮುಡಾ ಅಧ್ಯಕ್ಷ ಸಂತೋಷ್ ಕುಮಾರ್ ಶೆಟ್ಟಿ ಅವರು ಮುಡಾ ಆಯುಕ್ತರು, ವಾಸ್ತುಶಿಲ್ಪಿ ಸುಪ್ರೀತ್ ಆಳ್ವ ಹಾಗೂ ಅಧಿಕಾರಿಗಳೊಂದಿಗೆ ಯೋಜಿತ ರಸ್ತೆ ಮಾರ್ಗದಲ್ಲಿ ನಡಿಗೆಯ ಮೂಲಕ ಸ್ಥಳ ಪರಿಶೀಲನೆ ನಡೆಸಿದರು.
ರಸ್ತೆ ನಿರ್ಮಾಣದ ಸಂದರ್ಭದಲ್ಲಿ ಎದುರಾಗಬಹುದಾದ ಸಮಸ್ಯೆಗಳು, ತಾಂತ್ರಿಕ ಅಡಚಣೆಗಳು ಹಾಗೂ ಕಾಮಗಾರಿ ಅನುಷ್ಠಾನದ ಸಾಧ್ಯತೆಗಳ ಕುರಿತು ಸಮಗ್ರವಾಗಿ ಪರಿಶೀಲಿಸಲಾಯಿತು. ಸಮಸ್ಯೆಗಳಿಗೆ ಸೂಕ್ತ ಪರಿಹಾರ ಕಂಡುಕೊಂಡು ಕಾಮಗಾರಿಯನ್ನು ಸುಗಮವಾಗಿ ಕೈಗೊಳ್ಳಲು ಮಂಗಳೂರು ಮಹಾನಗರ ಪಾಲಿಕೆಯೊಂದಿಗೆ ಸಮನ್ವಯ ಸಾಧಿಸಿ ಅಗತ್ಯ ಕ್ರಮಗಳನ್ನು ಕೈಗೊಳ್ಳುವಂತೆ ಮುಡಾ ಅಧ್ಯಕ್ಷರು ಅಧಿಕಾರಿಗಳಿಗೆ ಸೂಚನೆ ನೀಡಿದರು.



