ನವದೆಹಲಿ, ನ.9: ದೀಪಾವಳಿಯನ್ನು ‘ಸಂತೋಷದ ಈದ್’ ಎಂದು ಬಣ್ಣಿಸಿದ ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಅವರ ಹೇಳಿಕೆಯನ್ನು ಬಿಜೆಪಿ ತೀವ್ರವಾಗಿ ಖಂಡಿಸಿದೆ. ಕಾಂಗ್ರೆಸ್ ಪಕ್ಷವು ಓಲೈಕೆ ರಾಜಕಾರಣದಲ್ಲಿ ತೊಡಗಿದ್ದು, ಹಿಂದೂಗಳ ಧಾರ್ಮಿಕ ಭಾವನೆಗಳಿಗೆ ಧಕ್ಕೆ ಉಂಟುಮಾಡುತ್ತಿದೆ ಎಂದು ಬಿಜೆಪಿ ಆರೋಪಿಸಿದೆ.
ನವದೆಹಲಿಯ ಬಿಜೆಪಿ ಕೇಂದ್ರ ಕಚೇರಿಯಲ್ಲಿ ನಡೆದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಪಕ್ಷದ ವಕ್ತಾರ ಗೌರವ್ ಭಾಟಿಯಾ, ಮುಸ್ಲಿಂ ಸಮುದಾಯವನ್ನು ಓಲೈಸುವ ಉದ್ದೇಶದಿಂದ ಕಾಂಗ್ರೆಸ್ ಹಿಂದೂ ಧಾರ್ಮಿಕ ಸಂಪ್ರದಾಯಗಳನ್ನು ಅಗೌರವಿಸುವುದನ್ನು ರೂಢಿಸಿಕೊಂಡಿದೆ ಎಂದು ಆರೋಪಿಸಿದರು.
ವಾರಾಂತ್ಯದಲ್ಲಿ ದೀಪಾವಳಿ ಹಬ್ಬದ ಶುಭಾಶಯ ಕೋರಿದ್ದ ಖರ್ಗೆ, ದೀಪಾವಳಿಯು ಭಾರತದಲ್ಲಿ ಎಲ್ಲರೂ ಆಚರಿಸುವ ಪ್ರಮುಖ ಹಬ್ಬವಾಗಿದ್ದು, ಇದನ್ನು ‘ಖುಷಿಯೋಂ ಕಾ ಈದ್’ (ಸಂತೋಷದ ಈದ್) ಎಂದು ಬಣ್ಣಿಸಿದ್ದರು.
ಈ ಹೇಳಿಕೆಗೆ ಆಕ್ಷೇಪ ವ್ಯಕ್ತಪಡಿಸಿದ ಬಿಜೆಪಿ, ಈದ್ ಹಬ್ಬವನ್ನು ‘ದೀಪಾವಳಿಯ ಸಂತಸ’ ಎಂದು ಕರೆಯಲು ಕಾಂಗ್ರೆಸ್ ಸಿದ್ಧವಿದೆಯೇ ಎಂದು ಪ್ರಶ್ನಿಸಿದೆ.




