ಮಂಗಳೂರು: ಯುವಜನತೆಯನ್ನು ಮಾದಕವಸ್ತುಗಳ ದುಷ್ಪರಿಣಾಮಗಳಿಂದ ರಕ್ಷಿಸುವುದರ ಜತೆಗೆ ವೈಯಕ್ತಿಕ ದತ್ತಾಂಶದ ಸುರಕ್ಷತೆ ಮತ್ತು ಡಿಜಿಟಲ್ ಜಾಗೃತಿಯ ಮಹತ್ವವನ್ನು ತಿಳಿಸುವ ನಿಟ್ಟಿನಲ್ಲಿ ವಿಶೇಷ ಜಾಗೃತಿ ಕಾರ್ಯಕ್ರಮವನ್ನು ನಗರದ ಉರ್ವ ಒಳಾಂಗಣ ಕ್ರೀಡಾಂಗಣದಲ್ಲಿ ಆಯೋಜಿಸಲಾಯಿತು.
ಭಾರತ ಸರ್ಕಾರದ ಯುವ ವ್ಯವಹಾರ ಮತ್ತು ಕ್ರೀಡಾ ಸಚಿವಾಲಯದ ನೆಹರು ಯುವ ಕೇಂದ್ರದ ಸಹಯೋಗ ಹಾಗೂ ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆಯ ಆಶ್ರಯದಲ್ಲಿ ನವೆಂಬರ್ 6ರಂದು ನಡೆದ ಕಾರ್ಯಕ್ರಮದಲ್ಲಿ ಜಿಲ್ಲಾ ಕನ್ನಡ ರಾಜ್ಯೋತ್ಸವ ಪ್ರಶಸ್ತಿ ಪುರಸ್ಕೃತ, ಸಮಾಜಸೇವಕ ಹಾಗೂ ಮಾದಕವಸ್ತು ವಿರೋಧಿ ಜಾಗೃತಿ ಕಾರ್ಯಕರ್ತ ಗಣೇಶ್ ಮುಲ್ಕಿ ನಾಯಕ್ ಅವರು ವಿಶೇಷ ಉಪನ್ಯಾಸ ನೀಡಿದರು.
ದಕ್ಷಿಣ ಕನ್ನಡ ಜಿಲ್ಲೆಯ ಅಪರ ಜಿಲ್ಲಾಧಿಕಾರಿ ಹಾಗೂ ಜಿಲ್ಲಾ ದಂಡಾಧಿಕಾರಿ ಹಿರಿಯ ಕೆಎಎಸ್ ಅಧಿಕಾರಿ ಕೆ. ರಾಜು ಮತ್ತು ಯುವ ಸಬಲೀಕರಣ ಹಾಗೂ ಕ್ರೀಡಾ ಇಲಾಖೆಯ ಸಹಾಯಕ ನಿರ್ದೇಶಕ ಪ್ರದೀಪ್ ಡಿ’ಸೋಜ ಅವರ ಪ್ರೇರಣೆ ಹಾಗೂ ಉಪಕ್ರಮದಲ್ಲಿ ಕಾರ್ಯಕ್ರಮವನ್ನು ಆಯೋಜಿಸಲಾಗಿತ್ತು.
ಕಾರ್ಯಕ್ರಮದಲ್ಲಿ ಮಾತನಾಡಿದ ಗಣೇಶ್ ನಾಯಕ್ ಅವರು, ಯುವಜನತೆಯಲ್ಲಿ ಹೆಚ್ಚುತ್ತಿರುವ ಮಾದಕವಸ್ತುಗಳ ದುರ್ಬಳಕೆ ಸಮಾಜದ ಭವಿಷ್ಯದ ಮೇಲೆ ಗಂಭೀರ ಪರಿಣಾಮ ಬೀರುತ್ತಿದೆ. ಮಾದಕವಸ್ತುಗಳ ಸೇವನೆಯಿಂದ ದೈಹಿಕ ಆರೋಗ್ಯ ಮಾತ್ರವಲ್ಲದೆ ಮಾನಸಿಕ ಆರೋಗ್ಯ, ಕುಟುಂಬ ಸಂಬಂಧಗಳು ಮತ್ತು ಸಾಮಾಜಿಕ ಜೀವನವೂ ಹದಗೆಡುತ್ತವೆ. ಸ್ನೇಹಿತರ ಒತ್ತಡ ಅಥವಾ ಕುತೂಹಲದಿಂದ ಇಂತಹ ದುಶ್ಚಟಗಳಿಗೆ ಬಲಿಯಾಗದಂತೆ ಯುವಜನರು ಎಚ್ಚರಿಕೆ ವಹಿಸಬೇಕು ಎಂದು ತಿಳಿಸಿದರು.
ವಿಶೇಷವಾಗಿ ಕ್ರೀಡಾಪಟುಗಳು ಮಾದಕವಸ್ತುಗಳಿಂದ ದೂರವಿರಬೇಕು. ಮಾದಕವಸ್ತುಗಳ ಬಳಕೆ ಕ್ರೀಡಾಪಟುಗಳ ದೈಹಿಕ ಸಾಮರ್ಥ್ಯ, ಏಕಾಗ್ರತೆ, ಮಾನಸಿಕ ಸ್ಥಿರತೆ ಹಾಗೂ ಕ್ರೀಡಾ ಭವಿಷ್ಯಕ್ಕೆ ಮಾರಕವಾಗಬಹುದು. ಕ್ರೀಡಾ ತರಬೇತುದಾರರು, ಪೋಷಕರು ಮತ್ತು ಕ್ರೀಡಾ ಕೇಂದ್ರಗಳ ನಿರ್ವಾಹಕರು ಯುವಜನರ ವರ್ತನೆಯಲ್ಲಿನ ಬದಲಾವಣೆಗಳನ್ನು ಗಮನಿಸಿ, ಆರಂಭಿಕ ಹಂತದಲ್ಲಿಯೇ ಸೂಕ್ತ ಮಾರ್ಗದರ್ಶನ ನೀಡಬೇಕು ಎಂದು ಹೇಳಿದರು.
ಇದೇ ಸಂದರ್ಭದಲ್ಲಿ ವೈಯಕ್ತಿಕ ದತ್ತಾಂಶ ಸಂರಕ್ಷಣೆ ಮತ್ತು ಡಿಜಿಟಲ್ ಸುರಕ್ಷತೆಯ ಕುರಿತು ಮಾಹಿತಿ ನೀಡಿದ ಅವರು, ಸಾಮಾಜಿಕ ಜಾಲತಾಣಗಳ ಬಳಕೆಯಲ್ಲಿ ಎಚ್ಚರಿಕೆ ಅಗತ್ಯ. ವೈಯಕ್ತಿಕ ಮಾಹಿತಿ, ಬ್ಯಾಂಕ್ ವಿವರಗಳು, ಪಾಸ್ವರ್ಡ್ಗಳು, ಒಟಿಪಿ ಹಾಗೂ ಖಾಸಗಿ ಚಿತ್ರಗಳನ್ನು ಅಪರಿಚಿತರೊಂದಿಗೆ ಹಂಚಿಕೊಳ್ಳಬಾರದು. ಆನ್ಲೈನ್ ವಂಚನೆ, ಸೈಬರ್ ಅಪರಾಧ ಮತ್ತು ಗುರುತು ಕಳ್ಳತನದಂತಹ ಅಪಾಯಗಳ ಬಗ್ಗೆ ಪ್ರತಿಯೊಬ್ಬರೂ ಜಾಗೃತರಾಗಿರಬೇಕು ಎಂದು ಸಲಹೆ ನೀಡಿದರು.



