ಮಂಗಳೂರು: ಕರಾವಳಿಯ ಹಾಸ್ಯ ಕಲಾವಿದರ ದಂಡನ್ನೇ ಒಳಗೊಂಡಿರುವ ಬಹುನಿರೀಕ್ಷಿತ ಕನ್ನಡ ಚಲನಚಿತ್ರ ‘ವಾದಿರಾಜ ವಾಲಗ ಮಂಡಳಿ’ (ವಿವಿಎಂ) ಚಿತ್ರೀಕರಣ ಪೂರ್ಣಗೊಂಡಿದ್ದು, ಡಿಸೆಂಬರ್ ತಿಂಗಳ ಅಂತ್ಯದಲ್ಲಿ ತೆರೆಗೆ ಬರಲು ಸಿದ್ಧವಾಗಿದೆ.
ಎಂ.ಎನ್.ಆರ್. ಪ್ರೊಡಕ್ಷನ್ಸ್ ಬ್ಯಾನರ್ನಲ್ಲಿ ನಿರ್ಮಾಣಗೊಂಡಿರುವ ಚಿತ್ರದ ಪೋಸ್ಟರ್ ಬಿಡುಗಡೆ ಸಮಾರಂಭ ನಡೆಯಿತು. ಈಗಾಗಲೇ ‘ಗಲಾಟೆ’ ಯಶಸ್ವಿ ಸಿನಿಮಾ ಹಾಗೂ ‘ಜೋಗುಳ’ ಧಾರಾವಾಹಿಯನ್ನು ನಿರ್ಮಿಸಿರುವ ಸಂಸ್ಥೆ, ಉತ್ತಮ ಅಭಿರುಚಿಯ ಕನ್ನಡ ಚಿತ್ರಗಳನ್ನು ನಿರ್ಮಿಸುವ ಉದ್ದೇಶದೊಂದಿಗೆ ಈ ಚಿತ್ರವನ್ನು ರೂಪಿಸಿದೆ.
ಬ್ರಹ್ಮಾವರ, ಮಂಗಳೂರು, ಮುಲ್ಕಿ ಹಾಗೂ ಕಾಸರಗೋಡು ಸೇರಿದಂತೆ ವಿವಿಧ ಪ್ರದೇಶಗಳಲ್ಲಿ ಎರಡು ಹಂತಗಳಲ್ಲಿ ಸುಮಾರು 55 ದಿನಗಳ ಕಾಲ ಚಿತ್ರೀಕರಣ ನಡೆಸಲಾಗಿದೆ. ಕರಾವಳಿ ಕನ್ನಡದ ಸೊಗಡು, ಸ್ಥಳೀಯ ಸಂಭಾಷಣಾ ಶೈಲಿ ಹಾಗೂ ಹಾಸ್ಯಭರಿತ ಕಥಾಹಂದರ ಚಿತ್ರದ ವಿಶೇಷತೆಯಾಗಿದೆ. ಕುಟುಂಬ ಸಮೇತರಾಗಿ ಕುಳಿತು ವೀಕ್ಷಿಸಬಹುದಾದ ಮನರಂಜನಾತ್ಮಕ ಚಿತ್ರವಾಗಿ ಇದು ಮೂಡಿಬಂದಿದೆ ಎಂದು ಚಿತ್ರತಂಡ ತಿಳಿಸಿದೆ.
‘ಗುಂಡುಮಾಮ’ ಖ್ಯಾತಿಯ ನವೀನ್ ಡಿ. ಪಡೀಲ್, ‘ಸು ಫ್ರಮ್ ಸೊ’ ಖ್ಯಾತಿಯ ಪ್ರಕಾಶ್ ತುಮಿನಾಡು, ದೀಪಕ್ ರೈ ಪಾಣಾಜೆ, ಪುಷ್ಪರಾಜ್ ಬೊಳ್ಳಾರು, ಮೈಮ್ ರಾಮದಾಸ್, ಗೋಪಿನಾಥ್ ಭಟ್, ಶೋಭರಾಜ್ ಪಾವೂರು ಹಾಗೂ ಲಕ್ಷ್ಮಣ ಮಲ್ಲೂರು ಪ್ರಮುಖ ಪಾತ್ರಗಳಲ್ಲಿ ಕಾಣಿಸಿಕೊಂಡಿದ್ದಾರೆ. ಅರ್ಜುನ್ ವೇದಾಂತ್ ಮತ್ತು ಅಥರ್ವ ಪ್ರಕಾಶ್ ನಾಯಕರು, ತನ್ವಿ ರಾವ್ ಹಾಗೂ ವೇನ್ಯ ರೈ ನಾಯಕಿಯರಾಗಿ ಅಭಿನಯಿಸಿದ್ದಾರೆ.
‘ವರಾಹ ರೂಪಂ’ ಹಾಡಿನ ಮೂಲಕ ಖ್ಯಾತಿ ಪಡೆದ ನಟ, ನಿರ್ದೇಶಕ ಹಾಗೂ ಸಾಹಿತಿ ಶಶಿರಾಜ್ ಕಾವೂರು ಚಿತ್ರದ ಕಥೆ, ಚಿತ್ರಕಥೆ ರಚಿಸಿ ನಿರ್ದೇಶನ ಮಾಡಿದ್ದಾರೆ. ಚೆನ್ನೈ ಮೂಲದ ಅನುಭವಿ ಛಾಯಾಗ್ರಾಹಕ ಎಸ್. ಚಂದ್ರಶೇಖರನ್ ಅವರ ಛಾಯಾಗ್ರಹಣ, ಮಣಿಕಾಂತ್ ಕದ್ರಿ ಅವರ ಸಂಗೀತ, ಸ್ಟಂಟ್ ಶಿವು ಅವರ ಸಾಹಸ ನಿರ್ದೇಶನ ಹಾಗೂ ವಿನಾಯಕ ಆಚಾರ್ಯ ಅವರ ನೃತ್ಯ ನಿರ್ದೇಶನ ಚಿತ್ರಕ್ಕಿದೆ. ಖ್ಯಾತ ಕಲಾವಿದ ದೇವಿ ಪೋಸ್ಟರ್ ವಿನ್ಯಾಸ ಮಾಡಿದ್ದಾರೆ.
ಒಂಬತ್ತು ಹಾಡುಗಳ ಸಂಗೀತಮಯ ಚಿತ್ರ
ಚಿತ್ರದಲ್ಲಿ ಒಟ್ಟು ಒಂಬತ್ತು ಹಾಡುಗಳಿದ್ದು, ಐದು ಪೂರ್ಣ ಪ್ರಮಾಣದ ಹಾಡುಗಳು ಹಾಗೂ ನಾಲ್ಕು ತುಣುಕು ಹಾಡುಗಳಿವೆ. ಕೆನಡಾ ಮೂಲದ ಅಭಿ ವಿ., ಚೆನ್ನೈ ಮೂಲದ ಸಾಯಿವಿಘ್ನೇಶ್, ಮೈಮ್ ರಾಮದಾಸ್, ಪ್ರಕಾಶ್ ಮಹಾದೇವನ್, ರವೀಂದ್ರ ಪ್ರಭು ಹಾಗೂ ಮಣಿಕಾಂತ್ ಕದ್ರಿ ಸೇರಿದಂತೆ ಹಲವು ಗಾಯಕರು ಹಾಡುಗಳಿಗೆ ಧ್ವನಿಯಾಗಿದ್ದಾರೆ.
ಜಯಪ್ರಕಾಶ್ ತುಂಬೆ ಸಹ ನಿರ್ಮಾಪಕರಾಗಿ ಸಹಕರಿಸಿದ್ದು, ಸಂತೋಷ್ ಶೆಟ್ಟಿ ಮತ್ತು ಲಕ್ಷ್ಮಣ ಕುಮಾರ್ ಮಲ್ಲೂರು ಕಾರ್ಯಕಾರಿ ನಿರ್ಮಾಪಕರಾಗಿ ಕಾರ್ಯನಿರ್ವಹಿಸಿದ್ದಾರೆ. ರಾಜೇಶ್ ಕುಡ್ಲ ಪ್ರೊಡಕ್ಷನ್ ಮ್ಯಾನೇಜರ್ ಆಗಿದ್ದಾರೆ.
ಚಿತ್ರವು ಮಲಯಾಳಂ ಹಾಗೂ ತಮಿಳು ಭಾಷೆಗಳಿಗೂ ಡಬ್ ಆಗುತ್ತಿದ್ದು, ಡಬ್ಬಿಂಗ್ ಕಾರ್ಯ ಪ್ರಗತಿಯಲ್ಲಿದೆ. ಕರಾವಳಿಯ ಹಾಸ್ಯ ಮತ್ತು ಕಥಾಹಂದರ ನೆರೆರಾಜ್ಯಗಳ ಪ್ರೇಕ್ಷಕರನ್ನೂ ಆಕರ್ಷಿಸಲಿದೆ ಎಂಬ ವಿಶ್ವಾಸ ಚಿತ್ರತಂಡದ್ದಾಗಿದೆ. ಚಿತ್ರ ಬಿಡುಗಡೆಗೆ ಸಿದ್ಧವಾಗಿದ್ದರೂ ಇತರ ಚಿತ್ರಗಳೊಂದಿಗೆ ಸ್ಪರ್ಧೆ ಉಂಟಾಗದಂತೆ ಡಿಸೆಂಬರ್ ಅಂತ್ಯದಲ್ಲಿ ಬಿಡುಗಡೆ ಮಾಡಲು ನಿರ್ಧರಿಸಲಾಗಿದೆ.
ಪೋಸ್ಟರ್ ಬಿಡುಗಡೆ ಸಮಾರಂಭದಲ್ಲಿ ಸಹ ನಿರ್ಮಾಪಕ ಜಯಪ್ರಕಾಶ್ ತುಂಬೆ, ನಟ ಗೋಪಿನಾಥ್ ಭಟ್, ಕಾರ್ಯಕಾರಿ ನಿರ್ಮಾಪಕರಾದ ಲಕ್ಷ್ಮಣ ಮಲ್ಲೂರು, ಸಂತೋಷ್ ಶೆಟ್ಟಿ, ನಿರ್ದೇಶಕ ಶಶಿರಾಜ್ ಕಾವೂರು, ನಟ ನವೀನ್ ಡಿ. ಪಡೀಲ್, ಸಂಗೀತ ನಿರ್ದೇಶಕ ಮಣಿಕಾಂತ್ ಕದ್ರಿ ಸೇರಿದಂತೆ ಚಿತ್ರತಂಡದ ಸದಸ್ಯರು ಉಪಸ್ಥಿತರಿದ್ದರು.



