ಮಂಗಳೂರು: ಯುವಜನರಲ್ಲಿ ಹೆಚ್ಚುತ್ತಿರುವ ಮಾದಕವಸ್ತು ದುರ್ಬಳಕೆಯನ್ನು ತಡೆಗಟ್ಟುವ ಜೊತೆಗೆ ವೈಯಕ್ತಿಕ ದತ್ತಾಂಶದ ಸುರಕ್ಷತೆ ಕುರಿತು ಅರಿವು ಮೂಡಿಸುವ ಉದ್ದೇಶದಿಂದ ವಿಶೇಷ ಜಾಗೃತಿ ಕಾರ್ಯಕ್ರಮವು ಶುಕ್ರವಾರ ನಗರದ ಉರ್ವ ಒಳಾಂಗಣ ಕ್ರೀಡಾಂಗಣದಲ್ಲಿ ನಡೆಯಿತು.
ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆಯ ದಕ್ಷಿಣ ಕನ್ನಡ ಜಿಲ್ಲಾ ಘಟಕದ ಆಶಯದಂತೆ ಆಯೋಜಿಸಲಾದ ಕಾರ್ಯಕ್ರಮದಲ್ಲಿ ಜಿಲ್ಲಾ ಕನ್ನಡ ರಾಜ್ಯೋತ್ಸವ ಪ್ರಶಸ್ತಿ ಪುರಸ್ಕೃತ, ಸಮಾಜಸೇವಕ ಹಾಗೂ ಮಾದಕವಸ್ತು ವಿರೋಧಿ ಜಾಗೃತಿ ಕಾರ್ಯಕರ್ತ ಗಣೇಶ್ ಮುಲ್ಕಿ ನಾಯಕ್ ಅವರು ಸಂಪನ್ಮೂಲ ವ್ಯಕ್ತಿಯಾಗಿ ಭಾಗವಹಿಸಿ ಜಾಗೃತಿ ಉಪನ್ಯಾಸ ನೀಡಿದರು.
ಮಾದಕವಸ್ತುಗಳ ಸೇವನೆಯಿಂದ ವ್ಯಕ್ತಿಯ ಆರೋಗ್ಯ, ಕುಟುಂಬ ಹಾಗೂ ಸಾಮಾಜಿಕ ಬದುಕಿನ ಮೇಲೆ ಉಂಟಾಗುವ ದುಷ್ಪರಿಣಾಮಗಳ ಕುರಿತು ಅವರು ವಿವರಿಸಿದರು. ಯುವಜನರು ದುಶ್ಚಟಗಳಿಂದ ದೂರವಿದ್ದು, ಕ್ರೀಡೆ, ಶಿಕ್ಷಣ ಮತ್ತು ಸೃಜನಶೀಲ ಚಟುವಟಿಕೆಗಳಲ್ಲಿ ತೊಡಗಿಸಿಕೊಳ್ಳಬೇಕು. ಮಾದಕವಸ್ತುಗಳ ಆಮಿಷಕ್ಕೆ ಒಳಗಾಗದೆ ಜಾಗೃತರಾಗಿರುವುದು ಪ್ರತಿಯೊಬ್ಬರ ಜವಾಬ್ದಾರಿಯಾಗಿದೆ ಎಂದು ತಿಳಿಸಿದರು.
ಇದೇ ವೇಳೆ ಡಿಜಿಟಲ್ ಜಗತ್ತಿನಲ್ಲಿ ವೈಯಕ್ತಿಕ ಮಾಹಿತಿಯ ಸುರಕ್ಷತೆಯ ಮಹತ್ವವನ್ನು ವಿವರಿಸಿದ ಅವರು, ಸಾಮಾಜಿಕ ಜಾಲತಾಣಗಳ ಬಳಕೆಯಲ್ಲಿ ಎಚ್ಚರಿಕೆ ವಹಿಸುವುದು, ವೈಯಕ್ತಿಕ ಮಾಹಿತಿಯನ್ನು ಅಪರಿಚಿತರೊಂದಿಗೆ ಹಂಚಿಕೊಳ್ಳದಿರುವುದು, ಆನ್ಲೈನ್ ವಂಚನೆಗಳಿಂದ ದೂರವಿರುವುದು ಹಾಗೂ ದತ್ತಾಂಶದ ಗೌಪ್ಯತೆಯನ್ನು ಕಾಪಾಡಿಕೊಳ್ಳುವ ಕುರಿತು ಮಾಹಿತಿ ನೀಡಿದರು.
ದಕ್ಷಿಣ ಕನ್ನಡ ಜಿಲ್ಲಾಧಿಕಾರಿ ಹಾಗೂ ಜಿಲ್ಲಾ ದಂಡಾಧಿಕಾರಿ ಶ್ರೀ ಕೆ. ರಾಜು (ಹಿರಿಯ ಕೆಎಎಸ್) ಅವರ ನೇತೃತ್ವದಲ್ಲಿ, ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆಯ ಸಹಾಯಕ ನಿರ್ದೇಶಕ ಪ್ರದೀಪ್ ಡಿಸೋಜಾ ಅವರ ಸಹಯೋಗದಲ್ಲಿ ಈ ಜಾಗೃತಿ ಕಾರ್ಯಕ್ರಮವನ್ನು ಆಯೋಜಿಸಲಾಗಿತ್ತು.



