ಮಂಗಳೂರು: ಸಮಾಜ ಸುಧಾರಕ ಕುದ್ಮಲ್ ರಂಗರಾವ್ ಅವರ ಸ್ಮರಣೆಯನ್ನು ಚಿರಸ್ಥಾಯಿಗೊಳಿಸುವ ನಿಟ್ಟಿನಲ್ಲಿ ಬಾಬುಗುಡ್ಡೆಯಲ್ಲಿರುವ ಅವರ ಸಮಾಧಿ ಹಾಗೂ ಕುದ್ಮಲ್ ರಂಗರಾವ್ ಉದ್ಯಾನವನವನ್ನು ಸಮಗ್ರವಾಗಿ ಅಭಿವೃದ್ಧಿಪಡಿಸಲು ಮಂಗಳೂರು ನಗರಾಭಿವೃದ್ಧಿ ಪ್ರಾಧಿಕಾರ (ಮುಡಾ) ಮುಂದಾಗಿದೆ.
ಈ ಹಿನ್ನೆಲೆಯಲ್ಲಿ ಮುಡಾ ಅಧ್ಯಕ್ಷ ಸಂತೋಷ್ ಕುಮಾರ್ ಶೆಟ್ಟಿ ಅವರು ಇಂದು ಬಾಬುಗುಡ್ಡೆಯಲ್ಲಿರುವ ಕುದ್ಮಲ್ ರಂಗರಾವ್ ಅವರ ಸಮಾಧಿ ಹಾಗೂ ಉದ್ಯಾನವನಕ್ಕೆ ಭೇಟಿ ನೀಡಿ ಸ್ಥಳ ಪರಿಶೀಲನೆ ನಡೆಸಿದರು.
ಕುದ್ಮಲ್ ರಂಗರಾವ್ ಅವರ ಜೀವನ ಸಾಧನೆ, ಸಮಾಜ ಸುಧಾರಣಾ ಕಾರ್ಯಗಳು ಹಾಗೂ ಸಮಾಜಮುಖಿ ಸೇವೆಗಳನ್ನು ಮುಂದಿನ ಪೀಳಿಗೆಗೆ ಪರಿಚಯಿಸುವ ಉದ್ದೇಶದಿಂದ ಉದ್ಯಾನವನ ಮತ್ತು ಸಮಾಧಿ ಸ್ಥಳದ ಅಭಿವೃದ್ಧಿಯ ಜತೆಗೆ ಮ್ಯೂಸಿಯಂ ನಿರ್ಮಾಣ ಮಾಡುವ ಸಾಧ್ಯತೆಗಳ ಬಗ್ಗೆಯೂ ಪರಿಶೀಲನೆ ನಡೆಸಿದರು.



