ಮುಂಬೈ: ಬಾಲಿವುಡ್ನ ಬಹುನಿರೀಕ್ಷಿತ ಹಾಗೂ ಬೃಹತ್ ಬಜೆಟ್ನ ಸಿನಿಮಾ ‘ರಾಮಾಯಣ’ದ ಎರಡನೇ ಭಾಗದ ಬಿಡುಗಡೆ ಮುಂದೂಡಿಕೆಯಾಗಿದೆ ಎಂಬ ಸುದ್ದಿ ಚಿತ್ರರಂಗದಲ್ಲಿ ಚರ್ಚೆಗೆ ಗ್ರಾಸವಾಗಿದೆ.
ನಿತೇಶ್ ತಿವಾರಿ ನಿರ್ದೇಶನ ಹಾಗೂ ನಮಿತ್ ಮಲ್ಹೋತ್ರಾ ನಿರ್ಮಾಣದ ಈ ಚಿತ್ರವನ್ನು ಆರಂಭದಲ್ಲಿ 2027ರಲ್ಲಿ ಬಿಡುಗಡೆ ಮಾಡಲು ಯೋಜಿಸಲಾಗಿತ್ತು. ಆದರೆ ಇದೀಗ ವರದಿಗಳ ಪ್ರಕಾರ, ‘ರಾಮಾಯಣ ಭಾಗ 2’ ಚಿತ್ರವು 2028ರ ದೀಪಾವಳಿ ಸಂದರ್ಭದಲ್ಲಿ ತೆರೆಕಾಣುವ ಸಾಧ್ಯತೆಯಿದೆ.
ಚಿತ್ರದ ಎರಡನೇ ಭಾಗದಲ್ಲಿ ರಾಮಾಯಣದ ಪ್ರಮುಖ ಯುದ್ಧದ ಸನ್ನಿವೇಶಗಳು ಮೂಡಿಬರಲಿದ್ದು, ಅದ್ಧೂರಿ ಆ್ಯಕ್ಷನ್ ದೃಶ್ಯಗಳು ಹಾಗೂ ಅತ್ಯಾಧುನಿಕ ವಿಎಫ್ಎಕ್ಸ್ ತಂತ್ರಜ್ಞಾನಕ್ಕೆ ಹೆಚ್ಚಿನ ಒತ್ತು ನೀಡಲಾಗುತ್ತಿದೆ. ಜಾಗತಿಕ ಮಟ್ಟದಲ್ಲಿ ಭಾರತೀಯ ಪೌರಾಣಿಕ ಕಥೆಯನ್ನು ಅದ್ದೂರಿಯಾಗಿ ಪ್ರಸ್ತುತಪಡಿಸುವ ಉದ್ದೇಶದಿಂದ ನಿರ್ಮಾಣ ಕಾರ್ಯಕ್ಕೆ ಹೆಚ್ಚಿನ ಸಮಯ ತೆಗೆದುಕೊಳ್ಳಲಾಗುತ್ತಿದೆ ಎನ್ನಲಾಗಿದೆ.
ಚಿತ್ರದ ಮೊದಲ ಭಾಗದಲ್ಲಿ ರಣಬೀರ್ ಕಪೂರ್ ರಾಮನಾಗಿ, ಸಾಯಿ ಪಲ್ಲವಿ ಸೀತೆಯಾಗಿ ಹಾಗೂ ಯಶ್ ರಾವಣನಾಗಿ ಕಾಣಿಸಿಕೊಳ್ಳಲಿದ್ದಾರೆ. ಸನ್ನಿ ಡಿಯೋಲ್ ಹನುಮಂತನ ಪಾತ್ರದಲ್ಲಿ ಅಭಿನಯಿಸಲಿದ್ದಾರೆ.
ಇನ್ನು ‘ರಾಮಾಯಣ ಭಾಗ 1’ ನವೆಂಬರ್ 5ರಂದು ಬಿಡುಗಡೆಯಾಗಲು ಸಿದ್ಧವಾಗಿದ್ದು, ಮೊದಲ ಭಾಗದ ಬಿಡುಗಡೆಯ ಬಳಿಕವೇ ಎರಡನೇ ಭಾಗದ ಬಿಡುಗಡೆ ದಿನಾಂಕದ ಕುರಿತು ಚಿತ್ರತಂಡ ಅಧಿಕೃತ ಮಾಹಿತಿ ನೀಡುವ ನಿರೀಕ್ಷೆಯಿದೆ.



