ಮೂಡುಬಿದಿರೆ: ಕೃತಕ ಬುದ್ಧಿಮತ್ತೆ (ಎಐ) ಸೇರಿದಂತೆ ಅತ್ಯಾಧುನಿಕ ತಂತ್ರಜ್ಞಾನಗಳು ವೇಗವಾಗಿ ಅಭಿವೃದ್ಧಿ ಹೊಂದುತ್ತಿರುವ ಸಂದರ್ಭದಲ್ಲಿ ಪರಿಸರದ ಮೇಲಿನ ಅವುಗಳ ಪರಿಣಾಮಗಳ ಬಗ್ಗೆಯೂ ಗಂಭೀರ ಚಿಂತನೆ ಅಗತ್ಯ. ಡೇಟಾ ಸೆಂಟರ್ಗಳ ನಿರ್ವಹಣೆಗೆ ಅಪಾರ ಪ್ರಮಾಣದ ವಿದ್ಯುತ್ ಮತ್ತು ನೀರು ಬಳಕೆಯಾಗುತ್ತಿದ್ದು, ತಂತ್ರಜ್ಞಾನದ ಅಭಿವೃದ್ಧಿಯ ಜತೆಗೆ ನೀರಿನ ಸಂರಕ್ಷಣೆಗೂ ಆದ್ಯತೆ ನೀಡಬೇಕು ಎಂದು ಊಟಿಯ ಜಿಯೋದಾರ್ ಸಂಸ್ಥೆಯ ಸಿಇಒ ಹಾಗೂ ಮುಖ್ಯ ವಿಜ್ಞಾನಿ ಡಾ. ಸೋಲೋಮನ್ ವಿಮಲ್ ಹೇಳಿದರು.
ಆಳ್ವಾಸ್ ಶಿಕ್ಷಣ ಪ್ರತಿಷ್ಠಾನದ ರೋಸ್ಟ್ರಮ್ ಸ್ಪೀಕರ್ಸ್ ಕ್ಲಬ್ ವತಿಯಿಂದ ಆಯೋಜಿಸಿದ್ದ ‘ಕೃತಕ ಬುದ್ಧಿಮತ್ತೆಯ ಯುಗದಲ್ಲಿ ನೀರಿನ ಸಂರಕ್ಷಣೆಯ ಅಗತ್ಯ’ ಕುರಿತ ವಿಶೇಷ ಉಪನ್ಯಾಸದಲ್ಲಿ ಅವರು ಮಾತನಾಡಿದರು.
ಕಂಪ್ಯೂಟರ್ ಸರ್ವರ್ಗಳನ್ನು ತಂಪಾಗಿಡಲು ಹಾಗೂ ವಿದ್ಯುತ್ ಉತ್ಪಾದನೆಗೆ ಹೆಚ್ಚಿನ ಪ್ರಮಾಣದ ನೀರು ಬಳಕೆಯಾಗುತ್ತಿದೆ. ಹೀಗಾಗಿ ಡೇಟಾ ಸೆಂಟರ್ಗಳ ನಿರ್ಮಾಣ ಮತ್ತು ನಿರ್ವಹಣೆಯಲ್ಲಿ ಪರಿಸರದ ಬಗ್ಗೆ ವಿಶೇಷ ಕಾಳಜಿ ವಹಿಸಬೇಕು. ನೀರಿನ ಬಳಕೆಯನ್ನು ಕಡಿಮೆ ಮಾಡುವುದರ ಜತೆಗೆ ಇಂಗಾಲದ ಹೊರಸೂಸುವಿಕೆಯನ್ನು ನಿಯಂತ್ರಿಸುವುದು ಅಗತ್ಯವಾಗಿದೆ ಎಂದರು.
ಭಾರತದಲ್ಲಿ ನೀರು ಅತ್ಯಮೂಲ್ಯ ಸಂಪನ್ಮೂಲವಾಗಿದ್ದು, ಕೃಷಿ ಕ್ಷೇತ್ರದಲ್ಲಿ ಹೆಚ್ಚಿನ ಪ್ರಮಾಣದ ನೀರು ಬಳಕೆಯಾಗುತ್ತಿದೆ. ನೀರಿನ ವ್ಯರ್ಥ ಬಳಕೆಯನ್ನು ತಡೆದು, ಮಳೆ ಹಾಗೂ ಹವಾಮಾನ ಮಾಹಿತಿಯನ್ನು ಆಧರಿಸಿ ಭವಿಷ್ಯದ ಯೋಜನೆಗಳನ್ನು ರೂಪಿಸಬೇಕು ಎಂದು ತಿಳಿಸಿದರು.
ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ಆಳ್ವಾಸ್ ಶಿಕ್ಷಣ ಪ್ರತಿಷ್ಠಾನದ ಟ್ರಸ್ಟಿ ವಿವೇಕ್ ಆಳ್ವ ಮಾತನಾಡಿ, ವಿದ್ಯಾರ್ಥಿಗಳು ಪುಸ್ತಕ ಜ್ಞಾನಕ್ಕೆ ಸೀಮಿತವಾಗದೆ ಜೀವನದ ಪ್ರತಿಯೊಂದು ಅನುಭವದಿಂದಲೂ ಕಲಿಯುವ ಮನೋಭಾವ ಬೆಳೆಸಿಕೊಳ್ಳಬೇಕು. ಹೊಸ ವಿಷಯಗಳನ್ನು ತಿಳಿದುಕೊಳ್ಳುವ ಆಸಕ್ತಿ ಹಾಗೂ ದೊರೆಯುವ ಅವಕಾಶಗಳನ್ನು ಸದುಪಯೋಗಪಡಿಸಿಕೊಳ್ಳುವ ಮೂಲಕ ಜ್ಞಾನ ಮತ್ತು ಸಾಮರ್ಥ್ಯವನ್ನು ವೃದ್ಧಿಸಿಕೊಳ್ಳಬೇಕು ಎಂದರು.
ಕಾರ್ಯಕ್ರಮದಲ್ಲಿ ಆಳ್ವಾಸ್ ಕಾಲೇಜಿನ ಪ್ರಾಚಾರ್ಯ ಡಾ. ಕುರಿಯನ್, ರೋಸ್ಟ್ರಮ್ ವೇದಿಕೆಯ ಸಂಯೋಜಕಿ ಡಾ. ದೀಪಾ ಕೊಠಾರಿ, ಆಳ್ವಾಸ್ ಕೃಷಿ ಕಾಲೇಜಿನ ಡೀನ್ ಡಾ. ವಾಸುದೇವನ್, ಸಹಪ್ರಾಧ್ಯಾಪಕ ಡಾ. ವಿನಯ ಭಾನು ಉಪಸ್ಥಿತರಿದ್ದರು. ವಿನಯ ಭಾನು ಕಾರ್ಯಕ್ರಮ ನಿರೂಪಿಸಿದರು. ಇಂದಿರಾ ಕಾವ್ಯ ವಂದಿಸಿದರು.



