ಮಂಗಳೂರು: ತುಳುನಾಡಿನ ಇತಿಹಾಸದಲ್ಲಿ ಆಳುಪರ ಆಡಳಿತದ ಕಾಲಘಟ್ಟದಲ್ಲಿ ಕೆಲ್ಲ ಪುತ್ತಿಗೆಯ ಕೆಲ್ಲರು ವಹಿಸಿದ ಸಾಹಸಮಯ ಪಾತ್ರವನ್ನು ದಾಖಲಿಸಿರುವ ಐತಿಹಾಸಿಕ ಸಂಶೋಧನಾ ಕೃತಿ ನವೆಂಬರ್ 14ರಂದು ಶನಿವಾರ ಸಂಜೆ 4.30ಕ್ಕೆ ತುಳುಭವನದಲ್ಲಿ ಬಿಡುಗಡೆಯಾಗಲಿದೆ.
ಇತಿಹಾಸ ತಜ್ಞ ಡಾ. ಪಿ.ಎನ್. ನರಸಿಂಹಮೂರ್ತಿ ಅವರು ಸತತ 35 ವರ್ಷಗಳ ಕಾಲ ನಡೆಸಿದ ಸಂಶೋಧನೆಯ ಫಲವಾಗಿ ಈ ಕೃತಿ ರೂಪುಗೊಂಡಿದೆ. ಕಾರ್ಯಕ್ರಮದಲ್ಲಿ ಡಾ. ತುಕಾರಾಂ ಪೂಜಾರಿ ಅವರು ಕೃತಿಯನ್ನು ಬಿಡುಗಡೆಗೊಳಿಸಿ, ಅದರ ಐತಿಹಾಸಿಕ ಮಹತ್ವ ಹಾಗೂ ಸಂಶೋಧನಾ ಅಂಶಗಳ ಕುರಿತು ಅವಲೋಕನ ಮಾಡಲಿದ್ದಾರೆ.
ಇದೇ ಸಂದರ್ಭದಲ್ಲಿ ಈ ಬಾರಿಯ ಕರ್ನಾಟಕ ರಾಜ್ಯೋತ್ಸವ ಪ್ರಶಸ್ತಿ ಪುರಸ್ಕೃತ ಹಿರಿಯ ಸಂಶೋಧಕಿ ಡಾ. ಇಂದಿರಾ ಹೆಗ್ಗಡೆ ಹಾಗೂ ತುಳು ಅಕಾಡೆಮಿಯ ಮಾಜಿ ಅಧ್ಯಕ್ಷ ಎ.ಸಿ. ಭಂಡಾರಿ ಅವರನ್ನು ಗೌರವಿಸಿ ಸನ್ಮಾನಿಸಲಾಗುವುದು ಎಂದು ಕರ್ನಾಟಕ ತುಳು ಸಾಹಿತ್ಯ ಅಕಾಡೆಮಿ ಅಧ್ಯಕ್ಷ ತಾರಾನಾಥ್ ಗಟ್ಟಿ ಕಾಪಿಕಾಡ್ ತಿಳಿಸಿದ್ದಾರೆ.


