ಹಾಸನ: ಶಕ್ತಿದೇವತೆ ಹಾಸನಾಂಬೆ ತಾಯಿಯ ದರ್ಶನೋತ್ಸವಕ್ಕೆ ನಿನ್ನೆ ತೆರೆ ಬಿದ್ದಿದ್ದು, ಇಂದು ದೇವಾಲಯದ ಹುಂಡಿಗಳಲ್ಲಿ ಸಂಗ್ರಹವಾಗಿರುವ ಕಾಣಿಕೆ ಹಣದ ಎಣಿಕೆ ಕಾರ್ಯ ಆರಂಭವಾಗಿದೆ.
ಹಾಸನ ನಗರದ ಥೇರಾ ಪಂಥ್ ಭವನದಲ್ಲಿ ದೇವಾಲಯದ ಆಡಳಿತಾಧಿಕಾರಿ ಜಗದೀಶ್ ಗಂಗಣ್ಣನವರ್ ಅವರ ನೇತೃತ್ವದಲ್ಲಿ ಜಿಲ್ಲಾಡಳಿತದ ಸಿಬ್ಬಂದಿ ಹುಂಡಿ ಹಣ ಎಣಿಕೆ ಕಾರ್ಯದಲ್ಲಿ ತೊಡಗಿದ್ದಾರೆ.
ಭಕ್ತರು ಹರಕೆ ರೂಪದಲ್ಲಿ ಹುಂಡಿಗೆ ಹಣದ ಜತೆಗೆ ಚಿನ್ನ ಮತ್ತು ಬೆಳ್ಳಿಯ ಆಭರಣಗಳನ್ನೂ ಸಮರ್ಪಿಸಿದ್ದಾರೆ. ಹಣ, ಚಿನ್ನ ಹಾಗೂ ಬೆಳ್ಳಿಯನ್ನು ಪ್ರತ್ಯೇಕವಾಗಿ ವಿಂಗಡಿಸಿ ಲೆಕ್ಕಾಚಾರ ಮಾಡಲಾಗುತ್ತಿದೆ.
ಈಗಾಗಲೇ ಹುಂಡಿಗಳಿಂದ 25.60 ಕೋಟಿ ರೂ. ಕಾಣಿಕೆ ಸಂಗ್ರಹವಾಗಿರುವ ಮಾಹಿತಿ ಲಭ್ಯವಾಗಿದೆ. ಇದರೊಂದಿಗೆ 1,000 ರೂ. ಮತ್ತು 300 ರೂ. ದರ್ಶನ ಟಿಕೆಟ್ ಹಾಗೂ ಲಾಡು ಪ್ರಸಾದ ಮಾರಾಟದಿಂದ 26.60 ಕೋಟಿ ರೂ. ಆದಾಯ ಬಂದಿದೆ ಎಂದು ತಿಳಿದುಬಂದಿದೆ.
ಈ ಬಾರಿಯ ಹಾಸನಾಂಬೆ ದರ್ಶನೋತ್ಸವದಲ್ಲಿ ದೇವಾಲಯಕ್ಕೆ ದಾಖಲೆಯ ಆದಾಯ ಹರಿದುಬಂದಿದ್ದು, ಹುಂಡಿ ಎಣಿಕೆ ಪೂರ್ಣಗೊಂಡ ಬಳಿಕ ಒಟ್ಟು ಕಾಣಿಕೆ ಮೊತ್ತದ ಅಧಿಕೃತ ಚಿತ್ರಣ ಲಭ್ಯವಾಗಲಿದೆ.



