ಚಿಕ್ಕಮಗಳೂರು: ನಗರದ ರಾಮನಹಳ್ಳಿ ಸಮೀಪದಲ್ಲಿರುವ ಚಿಕ್ಕಮಗಳೂರು ಜಿಲ್ಲಾ ಕಾರಾಗೃಹದಲ್ಲಿ ವಿಚಾರಣಾಧೀನ ಕೈದಿಗಳ ನಡುವೆ ಗಲಾಟೆ ನಡೆದಿದ್ದು, ಜೈಲು ಅಧೀಕ್ಷಕಿ ಹಾಗೂ ಸಿಬ್ಬಂದಿಗೆ ಜೀವ ಬೆದರಿಕೆ ಹಾಕಿ ಹಲ್ಲೆಗೆ ಯತ್ನಿಸಿದ ಘಟನೆ ವರದಿಯಾಗಿದೆ.
ರಾತ್ರಿ ಊಟದ ಸಮಯದಲ್ಲಿ ಕಾರಾಗೃಹದ ಬ್ಯಾರಕ್ ಸಂಖ್ಯೆ 1ರಲ್ಲಿ ವಿಚಾರಣಾಧೀನ ಕೈದಿಗಳ ನಡುವೆ ಪರಸ್ಪರ ಗಲಾಟೆ ನಡೆದಿದೆ. ಈ ವೇಳೆ ಬ್ಯಾರಕ್ನೊಳಗೆ ತಪಾಸಣೆ ನಡೆಸಲು ತೆರಳಿದ್ದ ಜೈಲು ಅಧೀಕ್ಷಕಿ ದೀಪಾ ಹಾಗೂ ಸಿಬ್ಬಂದಿಗೆ ನಾಲ್ವರು ಕೈದಿಗಳು ಜೀವ ಬೆದರಿಕೆ ಹಾಕಿ ಹಲ್ಲೆಗೆ ಯತ್ನಿಸಿದ್ದಾರೆ ಎಂದು ಆರೋಪಿಸಲಾಗಿದೆ.
ಈ ಸಂಬಂಧ ಜೈಲು ಅಧೀಕ್ಷಕಿ ದೀಪಾ ಅವರು ಬಸವನಹಳ್ಳಿ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ.
ವಿಚಾರಣಾಧೀನ ಕೈದಿಗಳಾದ ಅಹ್ಮದ್ ಖಾನ್, ಅಸ್ಪಾನ್ ಇರ್ಷಾದ್ ಅಹ್ಮದ್, ಹರ್ಷಿತ್ ಹಾಗೂ ಅವಿನಾಶ್ ದೊಂಡ್ರೇ ವಿರುದ್ಧ ಪ್ರಕರಣ ದಾಖಲಾಗಿದೆ. ಆರೋಪಿಗಳು ದರೋಡೆ, ಕೊಲೆ ಯತ್ನ ಹಾಗೂ ಪೋಕ್ಸೋ ಸೇರಿದಂತೆ ವಿವಿಧ ಪ್ರಕರಣಗಳಲ್ಲಿ ನ್ಯಾಯಾಂಗ ಬಂಧನದಲ್ಲಿದ್ದಾರೆ ಎಂದು ತಿಳಿದುಬಂದಿದೆ.
ಜೈಲು ಅಧೀಕ್ಷಕಿ ನೀಡಿದ ದೂರಿನ ಆಧಾರದ ಮೇಲೆ ಬಸವನಹಳ್ಳಿ ಪೊಲೀಸರು ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಗೊಂಡಿದ್ದಾರೆ.



