ತಿರುವನಂತಪುರಂ (ನ. 7): ಕಾಸರಗೋಡು ಜಿಲ್ಲೆಯ ಗಾಣಿಗ ಸಮುದಾಯವನ್ನು ಇತರೆ ಹಿಂದುಳಿದ ವರ್ಗಗಳ (OBC) ಪಟ್ಟಿಗೆ ಸೇರಿಸಿ ಕೇರಳ ಸರ್ಕಾರ ಮಹತ್ವದ ಆದೇಶ ಹೊರಡಿಸಿದೆ.
ಈ ಕುರಿತು ಸರ್ಕಾರದ ಆದೇಶ ಸಂಖ್ಯೆ (P) 17/2026/P&ARD, ದಿನಾಂಕ 26-09-2026ರಂತೆ ಅಧಿಕೃತ ಗಜೆಟ್ ಅಧಿಸೂಚನೆ ಪ್ರಕಟಗೊಂಡಿದೆ. ಇದರಿಂದ ಕಾಸರಗೋಡು ಮತ್ತು ಮಂಜೇಶ್ವರ ತಾಲೂಕುಗಳ ಗಾಣಿಗ ಸಮುದಾಯದವರಿಗೆ ಜಾತಿ ಪ್ರಮಾಣಪತ್ರ ಪಡೆಯುವ ಪ್ರಕ್ರಿಯೆಯಲ್ಲಿ ಎದುರಾಗುತ್ತಿದ್ದ ದೀರ್ಘಕಾಲದ ಸಮಸ್ಯೆಗೆ ಪರಿಹಾರ ದೊರೆತಂತಾಗಿದೆ.
ಇದುವರೆಗೆ ಕಾಸರಗೋಡು ಜಿಲ್ಲೆಯ ಗಾಣಿಗ ಸಮುದಾಯದವರು ಜಾತಿ ಪ್ರಮಾಣಪತ್ರ ಪಡೆಯಲು ಹಲವು ತೊಂದರೆಗಳನ್ನು ಎದುರಿಸುತ್ತಿದ್ದರು. ಕೇರಳದ ವಾಣಿಯನ್ ಮತ್ತು ಕಾಸರಗೋಡಿನ ಗಾಣಿಗರು ಒಂದೇ ಸಮುದಾಯಕ್ಕೆ ಸೇರಿದವರು ಎಂಬ ದೃಢೀಕರಣ ಪತ್ರ ಸಲ್ಲಿಸಿದ ಬಳಿಕವಷ್ಟೇ ಜಾತಿ ಪ್ರಮಾಣಪತ್ರ ನೀಡಲಾಗುತ್ತಿತ್ತು. ಇದರಿಂದ ವಿದ್ಯಾರ್ಥಿಗಳು ಸೇರಿದಂತೆ ಹಿರಿಯ ನಾಗರಿಕರೂ ತೊಂದರೆ ಅನುಭವಿಸುತ್ತಿದ್ದರು.
ಈ ಸಮಸ್ಯೆಯನ್ನು ಪರಿಹರಿಸುವ ನಿಟ್ಟಿನಲ್ಲಿ ಹಲವು ವರ್ಷಗಳಿಂದ ನಿರಂತರ ಪ್ರಯತ್ನಗಳು ನಡೆದಿದ್ದವು. ಪೆರ್ನೆ ಮುಚ್ಚಿಲೋಟ್ ಭಗವತಿ ಕ್ಷೇತ್ರದ ವಾಣಿಯ ಗಾಣಿಗ ಸೇವಾ ಸಮಿತಿ ಹಾಗೂ ಕಾಸರಗೋಡು ಜಿಲ್ಲಾ ವಾಣಿಯ ಗಾಣಿಗ ಸಭಾ ಈ ಕುರಿತು ಸರ್ಕಾರದ ಗಮನ ಸೆಳೆದು ಹೋರಾಟ ನಡೆಸಿದ್ದವು.
ಪ್ರಸ್ತುತ ಸರ್ಕಾರದ ಆದೇಶ ಮತ್ತು ಗಜೆಟ್ ಅಧಿಸೂಚನೆಯಿಂದ ಗಾಣಿಗ ಎಂದು ಜಾತಿ ಪ್ರಮಾಣಪತ್ರ ಹೊಂದಿರುವ ಕಾಸರಗೋಡು ಹಾಗೂ ಮಂಜೇಶ್ವರ ತಾಲೂಕುಗಳ ಸಮುದಾಯದವರು ವಾಣಿಯನ್ ಎಂಬ ಜಾತಿ ಹೆಸರಿನೊಂದಿಗೆ ಸಮಾನತೆ ದೃಢೀಕರಿಸಲು ಪ್ರತ್ಯೇಕ ಗಜೆಟ್ ಅಧಿಸೂಚನೆ ಮಾಡಿಸುವ ಅಗತ್ಯ ಇರುವುದಿಲ್ಲ ಎಂದು ತಿಳಿಸಲಾಗಿದೆ.
ಸರ್ಕಾರದ ಈ ಮಹತ್ವದ ಕ್ರಮಕ್ಕೆ ವಾಣಿಯ ಗಾಣಿಗ ಸೇವಾ ಸಮಿತಿ ಹಾಗೂ ವಾಣಿಯ ಗಾಣಿಗ ಸಭಾ ಅಭಿನಂದನೆ ಸಲ್ಲಿಸಿದ್ದು, ಸಮಸ್ಯೆ ಪರಿಹರಿಸಿದ ಸರ್ಕಾರಕ್ಕೆ ಕೃತಜ್ಞತೆ ವ್ಯಕ್ತಪಡಿಸಿವೆ.
Next Article
ಸಾಮರಸ್ಯ ಮಂಗಳೂರು ವತಿಯಿಂದ ಗೋಶಾಲೆಯಲ್ಲಿ ಗೋಪೂಜೆ
ಸಾಮರಸ್ಯ ಮಂಗಳೂರು ವತಿಯಿಂದ ಗೋಶಾಲೆಯಲ್ಲಿ ಗೋಪೂಜೆ

