ಅಹಮದಾಬಾದ್: ಅಪ್ರಾಪ್ತ ಬಾಲಕಿಯ ಮೇಲೆ ಪದೇಪದೇ ಲೈಂಗಿಕ ದೌರ್ಜನ್ಯ ಎಸಗಿ, ಆಕೆ ಗರ್ಭಿಣಿಯಾಗಲು ಕಾರಣನಾದ ಪ್ರಕರಣದಲ್ಲಿ 20 ವರ್ಷಗಳ ಜೈಲು ಶಿಕ್ಷೆಗೆ ಗುರಿಯಾಗಿದ್ದ ಯುವಕನ ಶಿಕ್ಷೆಯನ್ನು ಗುಜರಾತ್ ಹೈಕೋರ್ಟ್ ಅಮಾನತುಗೊಳಿಸಿದೆ. ಪ್ರಕರಣದ ವಿಚಾರಣೆ ವೇಳೆ ಬಾಲಕನನ್ನು ವಯಸ್ಕನಂತೆ ಪರಿಗಣಿಸುವ ಮುನ್ನ ಕಡ್ಡಾಯ ಕಾನೂನು ಪ್ರಕ್ರಿಯೆ ಪಾಲಿಸಲಾಗಿದೆಯೇ ಎಂಬುದರ ಬಗ್ಗೆ ನ್ಯಾಯಾಲಯ ಪ್ರಶ್ನೆ ಎತ್ತಿದೆ. ಇದೇ ಆಧಾರದಲ್ಲಿ ಆರೋಪಿಗೆ ಷರತ್ತುಬದ್ಧ ಜಾಮೀನು ಮಂಜೂರು ಮಾಡಿದೆ.
ನ್ಯಾಯಮೂರ್ತಿಗಳಾದ ಇಲೇಶ್ ಜೆ. ವೋರಾ ಮತ್ತು ಪ್ರಣವ್ ತ್ರಿವೇದಿ ಅವರನ್ನೊಳಗೊಂಡ ವಿಭಾಗೀಯ ಪೀಠ ಈ ಆದೇಶ ನೀಡಿದೆ.
ಪ್ರಕರಣದ ಆರೋಪಿತ ಘಟನೆ ನಡೆದಾಗ ಯುವಕನಿಗೆ ಸುಮಾರು 17 ವರ್ಷ ವಯಸ್ಸಾಗಿತ್ತು. ಸಂತ್ರಸ್ತ ಬಾಲಕಿ ಮತ್ತು ಆರೋಪಿ ಒಂದೇ ವಸತಿ ಸಂಕೀರ್ಣದಲ್ಲಿ ವಾಸಿಸುತ್ತಿದ್ದರು. ಬಾಲಕಿಯನ್ನು ಆಮಿಷವೊಡ್ಡಿ ಹಲವು ಬಾರಿ ಲೈಂಗಿಕ ದೌರ್ಜನ್ಯ ಎಸಗಿದ್ದರಿಂದ ಆಕೆ ಗರ್ಭಿಣಿಯಾಗಿದ್ದಳು ಎಂಬುದು ಪ್ರಾಸಿಕ್ಯೂಷನ್ ಆರೋಪವಾಗಿದೆ. ಈ ಸಂಬಂಧ ಸೂರತ್ನಲ್ಲಿ ಐಪಿಸಿ, ಪೋಕ್ಸೊ ಕಾಯ್ದೆ ಹಾಗೂ ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡಗಳ ಮೇಲಿನ ದೌರ್ಜನ್ಯ ತಡೆ ಕಾಯ್ದೆಯಡಿ ಪ್ರಕರಣ ದಾಖಲಾಗಿತ್ತು. ಪ್ರಕರಣದ ಆರಂಭಿಕ ವಿಚಾರಣೆ ನಡೆಸಿದ್ದ ಬಾಲ ನ್ಯಾಯ ಮಂಡಳಿ (Juvenile Justice Board), 2023ರ ಮೇ 1ರಂದು ಬಾಲಕನನ್ನು ವಯಸ್ಕನಂತೆ ವಿಚಾರಣೆ ನಡೆಸಲು ಮಕ್ಕಳ ನ್ಯಾಯಾಲಯಕ್ಕೆ ವರ್ಗಾಯಿಸಿತ್ತು.
ಆದರೆ, ಬಾಲ ನ್ಯಾಯ ಕಾಯ್ದೆ-2015ರ ಸೆಕ್ಷನ್ 19(1)ರ ಅಡಿಯಲ್ಲಿ ಬಾಲಕನನ್ನು ವಯಸ್ಕನಂತೆ ವಿಚಾರಣೆ ನಡೆಸಬೇಕೇ ಎಂಬುದನ್ನು ಮಕ್ಕಳ ನ್ಯಾಯಾಲಯ ಸ್ವತಂತ್ರವಾಗಿ ಪರಿಶೀಲಿಸಿ ಪ್ರತ್ಯೇಕ ಆದೇಶ ಹೊರಡಿಸಬೇಕಿತ್ತು. ಈ ಕಡ್ಡಾಯ ಪ್ರಕ್ರಿಯೆ ಪಾಲಿಸದೆ ವಿಚಾರಣೆ ಮುಂದುವರಿಸಲಾಗಿದೆ ಎಂಬುದು ಆರೋಪಿಯ ಪರ ವಕೀಲರ ವಾದವಾಗಿತ್ತು.
ಈ ಬಗ್ಗೆ ವರದಿ ಸಲ್ಲಿಸುವಂತೆ ಹೈಕೋರ್ಟ್ ಸೂರತ್ನ ಮಕ್ಕಳ ನ್ಯಾಯಾಲಯಕ್ಕೆ ಸೂಚಿಸಿತ್ತು. ವರದಿ ಮತ್ತು ನ್ಯಾಯಾಲಯದ ದಾಖಲೆಗಳನ್ನು ಪರಿಶೀಲಿಸಿದಾಗ ಸೆಕ್ಷನ್ 19(1)ರ ಅಡಿಯಲ್ಲಿ ಯಾವುದೇ ಪ್ರತ್ಯೇಕ ಆದೇಶ ಹೊರಡಿಸಿರುವುದು ಕಂಡುಬಂದಿಲ್ಲ ಎಂದು ಹೈಕೋರ್ಟ್ ಅಭಿಪ್ರಾಯಪಟ್ಟಿದೆ.
20 ವರ್ಷಗಳ ಶಿಕ್ಷೆಗೆ ತಡೆ
2026ರ ಫೆಬ್ರವರಿ 16ರಂದು ವಿಚಾರಣಾ ನ್ಯಾಯಾಲಯ ಆರೋಪಿಯನ್ನು ದೋಷಿ ಎಂದು ಘೋಷಿಸಿ, ವಿವಿಧ ಐಪಿಸಿ ಮತ್ತು ಪೋಕ್ಸೊ ಕಾಯ್ದೆಯ ಸೆಕ್ಷನ್ಗಳಡಿ ಶಿಕ್ಷೆ ವಿಧಿಸಿತ್ತು. ಗರಿಷ್ಠ 20 ವರ್ಷಗಳ ಕಠಿಣ ಜೈಲು ಶಿಕ್ಷೆ ವಿಧಿಸಲಾಗಿತ್ತು. ಎಲ್ಲ ಶಿಕ್ಷೆಗಳನ್ನು ಏಕಕಾಲದಲ್ಲಿ ಅನುಭವಿಸುವಂತೆ ಆದೇಶಿಸಲಾಗಿತ್ತು.
ಈ ತೀರ್ಪನ್ನು ಪ್ರಶ್ನಿಸಿ ಆರೋಪಿ ಹೈಕೋರ್ಟ್ ಮೆಟ್ಟಿಲೇರಿದ್ದ. ವಿಚಾರಣಾ ಪ್ರಕ್ರಿಯೆಯಲ್ಲಿ ಕಾನೂನಿನ ಕಡ್ಡಾಯ ನಿಯಮ ಪಾಲನೆಯಾಗದಿರುವುದು ಮೇಲ್ನೋಟಕ್ಕೆ ಕಂಡುಬಂದ ಹಿನ್ನೆಲೆಯಲ್ಲಿ, ಮೇಲ್ಮನವಿ ವಿಚಾರಣೆ ಪೂರ್ಣಗೊಳ್ಳುವವರೆಗೆ ಶಿಕ್ಷೆಯನ್ನು ಅಮಾನತುಗೊಳಿಸಲು ಹೈಕೋರ್ಟ್ ನಿರ್ಧರಿಸಿದೆ.
ಆರೋಪಿಯು 10 ಸಾವಿರ ರೂ. ವೈಯಕ್ತಿಕ ಬಾಂಡ್ ಹಾಗೂ ಅಷ್ಟೇ ಮೊತ್ತದ ಒಬ್ಬ ಜಾಮೀನುದಾರನ ಭದ್ರತೆ ನೀಡಬೇಕು. ಹೈಕೋರ್ಟ್ನ ಪೂರ್ವಾನುಮತಿ ಇಲ್ಲದೆ ದೇಶ ತೊರೆಯುವಂತಿಲ್ಲ. ಮೇಲ್ಮನವಿಯ ಅಂತಿಮ ವಿಚಾರಣೆಗೆ ಪ್ರಕರಣ ಪಟ್ಟಿ ಆದಾಗ ನ್ಯಾಯಾಲಯಕ್ಕೆ ಹಾಜರಾಗಬೇಕು ಎಂಬ ಷರತ್ತುಗಳನ್ನು ವಿಧಿಸಲಾಗಿದೆ.




